ರಾಜ್ಯ

ನೆರೆ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಆರ್ಥಿಕ ದುಷ್ಪರಿಣಾಮ- ಯಡಿಯೂರಪ್ಪ 

Raghavendra Adiga

ಬೆಂಗಳೂರು: ಯುಎನ್‍ಐ) ಪ್ರಸಕ್ತ ದೇಶದ ಜಿ.ಡಿ.ಪಿ ದರ ಶೇಕಡಾ 5ರಷ್ಟಿದ್ದು, ರಾಜ್ಯದ್ದು ಈ ಮೊದಲು ಜಿಎಸ್‍ಡಿಪಿ ಶೇಕಡಾ 9.6ರಷ್ಟಿತ್ತು. ಆದರೆ ನೆರೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆಯು ಕುಂಠಿತವಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಯೋಜನೆ ತಿಳಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರದಿಯನ್ನು ಶುಕ್ರವಾರ ವಿಧಾನಸಭೆಗೆ ಮಂಡಿಸಿದರು.

2019ರ ಮೊದಲ ಅರ್ಧ ವರ್ಷದಲ್ಲಿ ಸ್ವಂತ ರಾಜಸ್ವ ಸ್ವೀಕೃತಿಗಳ ಸಂಗ್ರಹಣೆಯು ಉತ್ತಮವಾದ ಹೆಚ್ಚಳವನ್ನು ತೋರಿಸಿದೆ. ಸೆಪ್ಟೆಂಬರ್ 2019ಕ್ಕೆ ಅಂತ್ಯಗೊಳ್ಳುವ, 2019-20ನೇ ಆರ್ಥಿಕ ವರ್ಷದ ಮೊದಲ ಆರು ತಿಂಗಳ ರಾಜ್ಯದ ಒಟ್ಟು ರಾಜಸ್ವ ಜಮೆಗಳು 61,982 ಕೋಟಿ ರೂಪಾಯಿಗಳಾಗಿವೆ ಎಂದು ವರದಿ ಹೇಳಿದೆ.

ಜಿ.ಎಸ್.ಟಿ ನಷ್ಟ ಪರಿಹಾರ 8716 ಕೋಟಿ ರೂಪಾಯಿಗಳು ಸೇರಿ ರಾಜ್ಯದ ಸ್ವಂತ ರಾಜಸ್ವ 59,062 ಕೋಟಿ ರೂಪಾಯಿಗಳಾಗಲಿವೆ. ರಾಜ್ಯದ ಸ್ವಂತ ರಾಜಸ್ವಗಳ ಪೈಕಿ ವಾಣಿಜ್ಯ ತೆರಿಗೆಯಿಂದ ಮೊದಲರ್ಧ ವರ್ಷದಲ್ಲಿ 38831 ಕೋಟಿ ರೂಪಾಯಿಗಳಾಗಲಿವೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ಇದು ಹೆಚ್ಚಾಗಿದ್ದು, ಕಳೆದ ವರ್ಷದ ಶೇಕಡಾ 49ಕ್ಕೆ ಹೋಲಿಸಿದರೆ ಈ ಬಾರಿ ಇದು ಶೇಕಡಾ 51 ಆಗಿರಲಿದೆ ಎಂದು ಸರ್ಕಾರ ತಿಳಿಸಿದೆ.

ಅಬಕಾರಿ ಇಲಾಖೆಯಿಂದ ಸೆಪ್ಟೆಂಬರ್ ಅಂತ್ಯದವರೆಗೆ 10796 ರಾಜಸ್ವ ಬರುವ ಸಂಭವ ಇದೆ. ಇದೂ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು. ಕಳೆದ ವರ್ಷ ಮಧ್ಯವಾರ್ಷಿಕ ಅವಧಿಯಲ್ಲಿ ಶೇಕಡಾ 50ರಷ್ಟು ಆದಾಯ ಬಂದಿದ್ದರೆ ಈಗ ಇದರ ಪ್ರಮಾಣ ಶೇಕಡಾ 52ರಷ್ಟು ಹೆಚ್ಚಿದೆ ಎಂದು ವರದಿ ಹೇಳಿದೆ.

ಇವೆರಡಲ್ಲದೇ ಒಟ್ಟು ವಿವಿಧ ಮೂಲಗಳಿಂದ ಆರ್ಥಿಕ ವರ್ಷದ ಮೊದಲರ್ಧ 59062 ಕೋಟಿ ರೂಪಾಯಿಗಳ ರಾಜಸ್ವ ಸಂಗ್ರಹವಾಗಲಿದೆ ಎಂಬ ಅಂದಾಜನ್ನು ಸರ್ಕಾರ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 51247 ಕೋಟಿ ರೂಪಾಯಿಗಳ ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷ ಶೇಕಡಾ 48ರಷ್ಟು ರಾಜಸ್ವ ಸಂಗ್ರಹವಾಗಿದ್ದರೆ, ಈ ವರ್ಷ ಶೇಕಡಾ 50ರಷ್ಟು ಸಂಗ್ರಹವಾಗುವ ಸಂಭವ ಇದೆ ಎಂದು ವರದಿ ವಿವರಿಸಿದೆ. ಅಲ್ಲದೇ ಆರ್ಥಿಕ ಬೆಳವಣಿಗೆಯಲ್ಲಿ ಶೇಕಡಾ 48 ಆಗುವ ಅಂದಾಜಿದೆ ಎಂದು ವರದಿ ತಿಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಶೇಕಡಾ 15.3ರಷ್ಟಿತ್ತು ಎಂದು ಅದು ಹೇಳಿದೆ.

SCROLL FOR NEXT