ರಾಜ್ಯ

ನಾಪತ್ತೆಯಾಗಿರುವ ನರಹಂತಕ ಹುಲಿ: ಬರಿಗೈಲಿ ಶಿಬಿರಕ್ಕೆ ವಾಪಸ್ಸಾದ ಅಧಿಕಾರಿಗಳು

Manjula VN

ಮೈಸೂರು: ಇಬ್ಬರು ರೈತರನ್ನು ಬಲಿ ಪಡೆದುಕೊಂಡಿದ್ದ ನರಹಂತಕ ಹುಲಿ ನಾಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಸುದೀರ್ಘವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಖಾಲಿ ಹಸ್ತದೊಂದಿಗೆ ಶಿಬಿರಗಳಿಗೆ ವಾಪಾಸ್ಸಾಗಿದ್ದಾರೆ. 

ಕಳೆದ 3-4 ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನರಹಂತಕ ಹುಲಿಗಾಗಿ ಸುದೀರ್ಘವಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಹುಲಿ ಅಲ್ಲಿದೆ, ಇಲ್ಲಿದೆ ಎಂಬ ಮಾಹಿತಿ ತಿಳಿದ ಕೂಡಲೇ ಎಲ್ಲೆಡೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ಆದರೂ, ಹುಲಿ ಈ ವರೆಗೂ ಪತ್ತೆಯಾಗಿಲ್ಲ.  ಕ್ಯಾಮೆರಾ ಹಾಗೂ ರಾಡಾರ್ (ವಿದ್ಯುತ್ಕಾಂತ ತರಂಗಗಳ ಮೂಲಕ ಚಲಿಸುವ ಕಾಯಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ) ಮೂಲಕ ಹುಲಿಯ ಚಲನವಲಗಳನ್ನು ಪತ್ತೆ ಹಚೆಚಲಾಗುತ್ತಿತ್ತು. ಆದರೆ, ಹುಲಿ ಸ್ಥಳದಿಂದ ಬೇರೆಡೆಗೆ ತೆರಳಿದ್ದು, ರಾಡಾರ್ ಮೂಲಕವೂ ಹುಲಿಯನ್ನು ಪತ್ತೆ ಹಚ್ಚಲಾಗುತ್ತಿಲ್ಲ. ರಾತ್ರೋರಾತ್ರಿ ಹುಲಿ ಬೇರೆ ಸ್ಥಳಕ್ಕೆ ತೆರಳಿರಬಹುದು ಎಂದು ಶಂಕಿಸಲಾಗಿದೆ. 

ಜನರ ಆತಂಕ ದೂರ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರೊಂದಿಗೆ ಮಾತನಾಡಿ, ನಮ್ಮ ಸಿಬ್ಬಂದಿಗಳ ಫೋನ್ ನಂಬರ್ ಗಳನ್ನು ನೀಡಲಾಗಿದೆ. ಹುಲಿಯ ಚಲನವಲನ ಕಂಡ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಶೀಘ್ರದಲ್ಲೇ ಹುಲಿಯನ್ನು ಸೆರೆ ಹಿಡಿಯಲಾಗುತ್ತದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಬಾಲಚಂದ್ರ ಅವರು ಹೇಳಿದ್ದಾರೆ. 

ಹುಲಿಯನ್ನು ಸೆರೆ ಹಿಡಿಯಲು ಈಗಾಗಲೇ 120 ಸಿಬ್ಬಂದಿಗಳು, 7 ಆನೆಗಳು ಹಾಗೂ 200 ಕ್ಯಾಮೆರಾಗಳು, 3 ಡ್ರೋಣ್ ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT