ರಾಜ್ಯ

ಸತತ ಮಳೆ: ಹಂಪಿಯ ಐತಿಹಾಸಿಕ 16 ಕಂಬದ ಮಂಟಪ ಕುಸಿತ

Raghavendra Adiga

ಹೊಸಪೇಟೆ: ಕಳೆದ ಎರಡು ವಾರಗಳಲ್ಲಿ ಭಾರೀ ಮಳೆಯಾಗಿದ್ದು ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕವೊಂದು ನೆಲಕ್ಕುರುಳಿದೆ.ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಿರೂಪಾಕ್ಷ ಬಜಾರ್ ನಲ್ಲಿರುವ  16 ಕಂಬಗಳ ಕಲ್ಲಿನ ಮಂಟಪ ಭಾನುವಾರ ಕುಸಿದು ಬಿದ್ದಿದೆ.

ನೀರಿನಿಂದ ತುಂಬಿದ್ದ ಮಂಟಪ ಭಾನುವಾರ ಕುಸಿದಿದೆ ಎಂದು ಸ್ಥಳೀಯ ನಿವಾಸಿ ಉದಯ್ ನಾಯಕ್ ಖಚಿತಪಡಿಸಿದ್ದಾರೆ ಆದರೆ ಘಟನೆ ವೇಳೆ ಸಮೀಪದಲ್ಲಿ ಯಾರೂ ಇರದ ಕಾರಣಪ್ರಾಣಾಪಾಯವೇನೂ ಸಂಭವಿಸಿಲ್ಲ.

ಈ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸ್ಮಾರಕದ ಜೀರ್ಣೋದ್ದಾರದ ಮಾತನ್ನಾಡಿದ್ದರೂ ಯಾವ ಕೆಲಸವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ವಿರೂಪಾಕ್ಷ ದೇವಸ್ಥಾನದ ಹಿರಿಯ ಅರ್ಚಕ ಶಿವ ಭಟ್ ಪತ್ರಿಕೆಗೆ ಮಾತನಾಡಿ  ದೇವಾಲಯದ ಬಲಭಾಗದಲ್ಲಿರುವ ಮಂಟಪವಿದಾಗಿದೆ ಎಂದರು.“ಇದು ಪೊಲೀಸ್ ಠಾಣೆಯ ಪಕ್ಕದಲ್ಲಿದೆ. ಬಹುಶಃ ಅದರ ಕೆಳಗಿರುವ ಭೂಮಿಯು ಸಡಿಲಗೊಂಡು ಹೀಗಾಗಿರುವ ಸಾಧ್ಯತೆ ಇದೆ" ಮತ್ತೊಬ್ಬ ಪುರೋಹಿತ ಶ್ರೀನಾಥ್ ಕೂಡ ಮಂಟಪವು ಸಂಪೂರ್ಣವಾಗಿ ಜಲಾವೃತವಾಗಿದ್ದದ್ದನ್ನು ಖಚಿತಪಡಿಸಿದ್ದಾರೆ.

“ಕಳೆದ ಎರಡು ವಾರಗಳಿಂದ ಭಾರಿ ಮಳೆಯಾಗಿದೆ. ನೀರನ್ನು ಹೊರಗೆ ಪಂಪ್ ಮಾಡಿದ್ದರೆ ಮಂಟಪ ಹಾನಿಒಗೊಳ್ಳುತ್ತಿರಲಿಲ್ಲ. ಇದು ಯಾವೊಬ್ಬ ಕಿಡಿಗೇಡಿಗಳ ಕೃತ್ಯವಲ್ಲ. ಪ್ರಕೃತಿಯ ಮುನಿಸು ಇದಕ್ಕೆ ಕಾರಣ" ವಿರೂಪಾಕ್ಷ ದೇವಾಲಯದಿಂದ ಸುಮಾರು 200 ಮೀಟರ್ ದೂರದಲ್ಲಿರುವ ಮಂಟಪ, ವಿರೂಪಾಕ್ಷ ಬಜಾರ್‌ನ ಭಾಗವಾಗಿತ್ತು.

ಏತನ್ಮಧ್ಯೆ ಮಂಟಪ ಕುಸಿದಿರುವುದು ಸುಳ್ಳು, ಆ ಸ್ಥಳದಲ್ಲಿ ಯಾವ ಅನಾಹುತವಾಗಿಲ್ಲ. ಕೇವಲ ವದಂತಿಗಳನ್ನು ಹರಡಿಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆ ಸ್ಥಳೀಯರ ಆದವನ್ನು ತಳ್ಳಿ ಹಾಕಿದೆ.

ಯಾವುದೇ ಮಂಟಪದ ಕುಸಿತವಾಗಿಲ್ಲ. ನೀರಿನ ಪ್ರವಾಹ ಹೆಚ್ಚಿದೆ.ಯಾರೋ ವದಂತಿಗಳನ್ನು ಹರಡುತ್ತಿದ್ದಾರೆ, ”ಎಂದು ಹಂಪಿ ಮಿನಿ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಪಿ ಕಾಳಿಮುತ್ತು ಪತ್ರಿಕೆಗೆ ಹೇಳಿದ್ದಾರೆ. ಅವರು ವೈಯಕ್ತಿಕವಾಗಿ ಈ ಸ್ಥಳಕ್ಕೆ ಭೇಟಿ ನೀಡಿದ್ದು, ಎಲ್ಲಾ ಮಂಟಪಗಳು ಹಾಗೇ ಇರುವುದನ್ನು ಕಂಡುಕೊಂಡಿದ್ದಾಗಿ ಹೇಳಿದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ತಾಂತ್ರಿಕ ನೆರವಿನೊಂದಿಗೆ ದೇವಾಲಯದ ಪಕ್ಕದಲ್ಲಿರುವ ಹಂಪಿಯ ಹಳೆಯ ವಿರೂಪಾಕ್ಷ ಬಜಾರ್‌ನ ಕಳೆದುಹೋದ ವೈಭವವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಎಎಸ್‌ಐ ಕಾರ್ಯನಿರ್ವಹಿಸುತ್ತಿದೆ 

SCROLL FOR NEXT