ರಾಜ್ಯ

ಸಮನ್ಸ್ ಹಿಂಪಡೆದ ಇಡಿ: ಡಿಕೆಶಿ ಪತ್ನಿ, ತಾಯಿಗೆ ತಾತ್ಕಾಲಿಕ ರಿಲೀಫ್

Manjula VN

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ ಅವರಿಗೆ ನೀಡಿದ್ದ ಸಮನ್ಸ್ ಅನ್ನು ಸದ್ಯದ ಮಟ್ಟಿಗೆ ಹಿಂದಕ್ಕೆ ಪಡೆದುಕೊಳ್ಳಲು ಜಾರಿ ನಿರ್ದೇಶನಾಲಯ ತೀರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ಡಿಕೆಶಿ ಪತ್ನಿ ಹಾಗೂ ತಾಯಿಗೆ ತಾತ್ಕಾಲಿಕ ರಿಲೀಫ್ ದೊರೆತಂದಾಗಿದೆ. 

ಇಡಿ ನೀಡಿದ್ದ ಸಮನ್ಸ್ ಪ್ರಶ್ನಿಸಿ ಉಷಾ ಶಿವಕುಮಾರ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ನ್ಯಾ.ಬ್ರಜೇಶ್ ಸೇಠಿ ನೇತೃತ್ವದ ದ್ವಿಸದಸ್ಯ ನ್ಯಾಯಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲಿ ಇಡಿ ಪರ ವಾದ ಮಂಡನೆ ಮಾಡಲಿದ್ದ ವಕೀಲ ಅಮಿತ್ ಮಹಾಜನ್ ಅವರು ಉಪಸ್ಥಿತರಿರಲಿಲ್ಲ. ಗೌರಮ್ಮ ಮತ್ತು ಉಪಾ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ದಯಾನ್ ಕೃಷ್ಣನ್ ಅವರು, 15 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಿಚಾರಣೆಗೆಂದು ತಮ್ಮ ವ್ಯಾಪ್ತಿ ಹೊರಗಿನ ಪೊಲೀಸ್ ಠಾಣೆಗಳಿಗೆ ಕರೆತರುವಂತಿಲ್ಲ ಎಂದು ಸಿಆರ್'ಪಿಸಿಯ ಸೆಕ್ಷನ್ 160 ಹೇಳುತ್ತದೆ. ತಮ್ಮ ವ್ಯಾಪ್ತಿ ಪ್ರದೇಶದ ಹೊರಗೆ ನಡೆಯುವ ವಿಚಾರಣೆಗಳಿಗೆ ಮಹಿಳೆಯರು ಹಾಜರಾಗಬೇಕಿಲ್ಲ. ನನ್ನ ಕಕ್ಷಿದಾರರಾದ ಗೌರಮ್ಮ ಅವರಿಗೆ 84 ವರ್ಷ ವಯಸ್ಸಾಗಿದೆ. ಅವರನ್ನು ಇಡಿ ದೆಹಲಿಯಲ್ಲಿ ವಿಚಾರಣೆಗೆ ಕರೆದಿದೆ. ಹೀಗಾಗಿ ಎರಡೂ ಸಮನ್ಸ್ ಅನ್ನು ರದ್ದುಪಡಿಸಬೇಕು ಎಂದು ವಾದಿಸಿದರು. 

ಇಡಿ ಪರ ಹಾಜರಾದ ವಕೀಲರು, ನಾವು ಸದ್ಯ ಸಮನ್ಸ್ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ. ಇನ್ನೂ 7 ದಿನಗಳ ಕಾಲ ಹೊಸ ಸಮನ್ಸ್ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ನ್ಯಾಯಾಲಯನು ಮುಂದಿನ ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು. ಈ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾರಜರಾಗುವುದರಿಂದ ಗೌರಮ್ಮ ಹಾಗೂ ಉಷಾ ಅವರು ಬಚಾವ್ ಆಗಿದ್ದಾರೆ. 

SCROLL FOR NEXT