ರಾಜ್ಯ

ಹೊಸಪೇಟೆ-ಹರಿಹರ ನೂತನ ರೈಲಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ

Srinivasamurthy VN

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಭಾಗದ ಜನರ ಸುಮಾರು ಎರಡುವರೆ ದಶಕದ‌ ಕನಸು ಈಗ ನನಸಾಗಿದ್ದು, ಹೊಸಪೇಟೆ-ಹರಿಹರ ನೂತನ ರೈಲಿಗೆ ಚಾಲನೆ ನೀಡಲಾಗಿದೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಇಂದು ನೂತನ ರೈಲಿಗೆ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಸಂಸದರಾದ ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ, ಕರಡಿ ಸಂಗಣ್ಣ,  ಶಾಸಕ ಸೋಮಶೇಖರ ರೆಡ್ಡಿ ಹಲವರು ಉಪಸ್ಥಿತರಿದ್ದರು. ಈ ರೈಲು ಚಾಲನೆಯಿಂದಾಗಿ ಹೊಸಪೇಟೆ, ಕೊಟ್ಟೂರು, ದಾವಣಗೆರೆ ಜನರಿಗೆ ಅನುಕೂಲವಾಗಲಿದ್ದು, ಈ ರೈಲು ಒಟ್ಟು 9 ಕೋಚ್ ಹೊಂದಿರಲಿದೆ. 

ಇನ್ನು ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ಕರಡಿ ಸಂಗಣ್ಣ, 'ನಮ್ಮ ಪಕ್ಷದ ಹಲವು ನಾಯಕರು ಮತ್ತು ಈ ಭಾಗದ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಇಂದು ಹೊಸಪೇಟೆ ಹರಿಹರ ಹೊಸ ರೈಲು ಮಾರ್ಗ ಪ್ರಾರಂಭವಾಗಿದೆ. ಹೊಸ ಪ್ರಯಾಣಿಕರ ಮಾರ್ಗಕ್ಕೆ ಚಾಲನೆ ನೀಡಿದ ಸುರೇಶ್ ಅಂಗಡಿಯವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಗಂಗಾವತಿಯಿಂದ ಬೆಂಗಳೂರಿಗೆ ಹೊಸ ರೈಲನ್ನು ಪ್ರಾರಂಭಿಸುವಂತೆ ಮತ್ತು ಇನ್ನೂ ಹಲವು ಹೊಸ ಮಾರ್ಗ ಗಳು ಮತ್ತು ಮೇಲ್ಸೇತುವೆ ಮತ್ತು ಕೆಳ ಸೇತುವೆಯನ್ನ ನಿರ್ಮಾಣಮಾಡಬೇಕು ಸಂಗಣ್ಣ ಸಚಿವರಿಗೆ ಮನವಿ ಮಾಡಿಕೊಂಡರು. 

ಅಂತೆಯೇ ಹೊಸಪೇಟೆ ಯಿಂದ ಗೋವಾ ವರೆಗೆ ವಿದ್ಯೂತ್ ರೈಲು ಸಂಚಾರ ಕಾಮಗಾರಿ ನಡೆಯುತ್ತದೆ. ಇದೆಲ್ಲ ನಮ್ಮ ಪ್ರದಾನಿ ಮೋದಿಯವರ ಸಾಧನೆ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಜಿ.ಎಂ.ಸಿದ್ದೇಶ ಅವರು, ಈ ನೂತನ ರೈಲು ಸಂಚಾರ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಸುರೇಶ್ ಅಂಗಡಿಯವರು ರೈಲ್ವೇ ಸಚಿವರಾದ ಮೇಲೆ ಸಾಕಷ್ಠು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಈಗ ಪ್ರಾರಂಭಿಸಿರುವ ಹೊಸಪೇಟೆ-ಹರಿಹರ ರೈಲ್ವೇ ಬಳ್ಳಾರಿವರೆಗೆ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಆದಷ್ಟು ಬೇಗ ಸಚಿವರು ಆ ಕೆಲಸ ಕೂಡ ಮಾಡಬೇಕು ಎಂದು ಹೇಳಿದರು.

ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ ಅವರು ಮಾತನಾಡಿ, 'ನೂತನ ರೈಲು ಸಂಚಾರಕ್ಕೆ ಹೋರಾಟ ನಡೆಸಿದ ಎಲ್ಲಾ ಮಠಾಧೀಶರಿಗೆ ಮತ್ತು ವಿವಿಧ ಪ್ರಗತಿ ಪರ ಸಂಘಟನೆಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಸಂಸದನಾದ ಮೇಲೆ ಈ ರೈಲ್ವೇ ಮಾರ್ಗ ಪ್ರಾರಂಭವಾಗಿದ್ದು ಈ ಬಗ್ಗೆ ನನಗೆ ಹೆಮ್ಮೆ ಇದೆ. ಹೊಸಪೇಟೆ ಹರಿಹರ ನೂತನ ರೈಲ್ವೇ ಸಂಚಾರ ಪ್ರಾರಂಭದಿಂದ ರೈತರಿಗೆ ಕೈಗಾರಿಕೆಗಳಿಗೆ ಬಡ ಜನಗಳಿಗೆ ತುಂಬಾ ಅನುಕೂಲ ಆಗುತ್ತದೆ ಎಂದು ಹೇಳಿದರು.

SCROLL FOR NEXT