ರಾಜ್ಯ

ಕಳಸಾ ಬಂಡೂರಿ ಯೋಜನೆಗೆ ಪರಿಸರ ಒಪ್ಪಿಗೆ; ಮೋದಿ ಸರ್ಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಧನ್ಯವಾದ

Srinivas Rao BV

ಬೆಂಗಳೂರು: ಮಹದಾಯಿ ನದಿಯಿಂದ ಬರ ಪೀಡಿತ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ  ಕಳಸಾ ಬಂಡೂರಿ ಯೋಜನೆಗೆ ಪರಿಸರ  ಸಚಿವಾಲಯದಿಂದ ಒಪ್ಪಿಗೆ ಮಂಜೂರು ಮಾಡಿರುವ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಧನ್ಯವಾದ ಸಲ್ಲಿಸಿದ್ದಾರೆ.  

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ .ಎಸ್ .ಯಡಿಯೂರಪ್ಪ, ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ತನ್ನ ಒಪ್ಪಿಗೆ ಸೂಚಿಸಿದ್ದು, ಯೋಜನೆಯನ್ನು ಪೂರ್ಣಗೊಳಿಸಲು ಬಹುತೇಕ ಅನುವುಮಾಡಿಕೊಟ್ಟಿದೆ ಎಂದು ಹೇಳಿದರು. ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಅಂತ್ಯಗೊಳಿಸಲು ಶ್ರಮಿಸುವುದಾಗಿ ತಮ್ಮ ಸರ್ಕಾರ ಭರವಸೆ ನೀಡಿತ್ತು. ಅದರಂತೆ, ಯೋಜನೆ ಪೂರ್ಣಗೊಳಿಸಲು ಇದ್ದ ಪ್ರಮುಖ ಅಡ್ಡಿಯನ್ನು ಕೇಂದ್ರ ಸರ್ಕಾರ ನಿವಾರಿಸಿದ್ದು, ಭರವಸೆ ಈಡೇರಿಸಿದಂತಾಗಿದೆ. ಯೋಜನೆಯ ಕಾಮಗಾರಿ ಆರಂಭಿಸಲು ನಾವು ಶೀಘ್ರದಲ್ಲಿಯೇ ಕ್ರಮ  ಆರಂಭಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಬೇಸಿಗೆ ಸಮಯದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿರುವ ಬೆಳಗಾವಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ  ಉದ್ದೇಶವನ್ನು ಈ ಯೋಜನೆ ಹೊಂದಿದೆ. ಗೋವಾದ ಜೀವನದಿಯಾಗಿರುವ  ಮಹದಾಯಿ  ನದಿಯಿಂದ  ನೀರನ್ನು  ಮಲಪ್ರಭ ನದಿಗೆ  ತಿರುಗಿಸುವ ಯೋಜನೆ ಇದಾಗಿದೆ.

ಕಳೆದ ಹಲವು ದಶಕಗಳಿಂದ ಬಾಕಿ ಉಳಿದುಕೊಂಡಿರುವ ಕುಡಿಯುವ ನೀರಿನ  ಯೋಜನೆಗೆ  2002ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ  ಅಂದಿನ ಸರ್ಕಾರ  ಪುನರುಜ್ಜೀವನಗೊಳಿಸಿತ್ತು. ಆದರೆ, ಮಹದಾಯಿ ನದಿಯನ್ನು ತಿರುಗಿಸುವುದರಿಂದ  ಗೋವಾದ ಅರಣ್ಯ ಪರಿಸರ ಹಾಗೂ ವನ್ಯಜೀವಿಗಳ ಮೇಲೆ  ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಅಂದಿನ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಕ್ಷೇಪ ಎತ್ತಿದ್ದ ಹಿನ್ನಲೆಯಲ್ಲಿ ಯೋಜನೆಗೆ ಸಂಕಷ್ಟ ಎದುರಾಯಿತು. ಆದರೆ, ಯೋಜನೆಗೆ ಪರಿಸರ ಅನುಮೋದನೆಗಾಗಿ  ಕೇಂದ್ರ ಸರ್ಕಾರದ ಮೇಲೆ ಒತ್ತಡ ತೀವ್ರಗೊಂಡಿತ್ತು. ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ,  ಉತ್ತರ ಕರ್ನಾಟಕದಲ್ಲಿ ತೀವ್ರ ರೀತಿಯ ಹೋರಾಟ, ಪ್ರತಿಭಟನೆಗಳು ನಡೆದಿದ್ದವು. ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಮಹದಾಯಿ ನದಿ ತಿರುವ ವಿವಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರಮುಖ ಚುನಾವಣಾ ವಿಷಯವಾಗಿತ್ತು.

SCROLL FOR NEXT