ರಾಜ್ಯ

ತಿವಾರಿ ಹತ್ಯೆ: ಹುಬ್ಬಳ್ಳಿ ವ್ಯಕ್ತಿಗೆ ಆರೋಪಿ ಗೊತ್ತಿರಬಹುದು ಆದರೆ, ನೇರವಾಗಿ ಭಾಗಿಯಾಗಿಲ್ಲ- ಪೊಲೀಸರು

Manjula VN

ಹುಬ್ಬಳ್ಳಿ: ಉತ್ತರಪ್ರದೇಶದ ಹಿಂದೂ ಮುಖಂಡ ಕಮಲೇಶ ತಿವಾರಿ ಹತ್ಯೆಯಲ್ಲಿ ಭಾಗಿಯಾದ ಶಂಕೆ ಮೇರೆಗೆ ಹುಬ್ಭಳ್ಳಿಯ ರೈಲ್ವೇ ವರ್ಕ್ ಶಾಪ್"ನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಾದಿಕ್ ಜಾಫರ್'ನನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ ಆಂತರಿಕ ಭದ್ರತಾ ಪಡೆ (ಐಎಸ್'ಡಿ) ಅಧಿಕಾರಿಘಳು ತೀವ್ರ ವಿಚಾರಣೆ ಬಳಿಕ ಬುಧವಾರ ಬಿಡುಗಡೆ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. 

ಈತನನ್ನು ಐಎಸ್'ಡಿ ಕೋರಿಕೆ ಮೇರೆಗೆ ಮಹಾನಗರ ಪೊಲೀಸರು ವಶಕ್ಕೆ ಪಡೆದು ಅವರಿಗೆ ಒಪ್ಪಿಸಿದ್ದರು. ಬೆಂಗಳೂರಿಗೆ ಕರೆದೊಯ್ದಿದ್ದ ತಂಡ ಎರಡು ದಿನ ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ಬುಧವಾರ ಸಂಜೆ ಬಿಡುಗಡೆ ಮಾಡಿದ್ದಾರೆ. 

ನಗರ ಪೊಲೀಸರು ಮೊಹಮ್ಮದ್ ಸಾಧಿಕ್ ನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದು, ನಗರ ಬಿಟ್ಟು ಹೋಗದಂತೆ ಬೇರೆಡೆ ಹೋಗುವುದಾದರೆ ಮಾಹಿತಿ ನೀಡುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಅಪರಾಧ ಪ್ರಕರಣದಲ್ಲಿ ಸಾಧಿಕ್ ನೇರವಾಗಿ ಭಾಗಿಯಾಗಿಲ್ಲ. ಮತ್ತೊಬ್ಬ ಆರೋಪಿಯೊಂದಿಗೆ ಸಾಧಿಕ್ ನಡೆಸಿದ್ದ ಸಂಭಾಷಣೆಯಿಂದಾಗಿ ಸಾಧಿಕ್'ನನ್ನು ಕರ್ನಾಟಕ ಪೊಲೀಸರು ವಿಚಾರಣೆ ನಡೆಸಿದ್ದರು. ಸಾಧಿಕ್ ಕರೆ ಮಾಡಿದ್ದ ಸಯ್ಯದ್ ಅಸಿಮ್ ಅಲಿ ಎಂಬಾತ ಅರೋಪಿ ಪರ ವಕೀಲರನ್ನು ನೇಮಕ ಮಾಡಲು ಸಹಾಯ ಮಾಡುವಂತೆ ಕೇಳುತ್ತಿದ್ದ ಎಂದು ಉತ್ತರ ಪ್ರದೇಶ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ವಿಚಾರಣೆ ಪ್ರಗತಿಗಳನ್ನು ಉತ್ತರಪ್ರದೇಶ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ. ಸಾಧಿಕ್ ವಿರುದ್ಧ ಕರ್ನಾಟಕದಲ್ಲಿ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲ. ತಿವಾರಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಮಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 8 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. 

SCROLL FOR NEXT