ರಾಜ್ಯ

ಆರ್'ಸಿಇಪಿ ವ್ಯಾಪ್ತಿಯಿಂದ ಹೈನೋತ್ಪನ್ನ ಹೊರಗಿಡುವಂತೆ ಪ್ರಧಾನಿ ಮೋದಿಗೆ ಮನವಿ: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಭಾರತವು ಸಹಿ ಹಾಕಲು ಮುಂದಾಗಿರುವ ಮುಕ್ತ ವ್ಯಾಪಾರ ಒಡಂಬಡಿಕೆ (ಆರ್'ಸಿಇಪಿ)ಯ ವ್ಯಾಪ್ತಿಯಿಂದ ಹೈನೋತ್ಪನ್ನವನ್ನು ಹೊರಗಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯ ಸಂಸದರ ನಿಯೋಗದೊಂದಿಗೆ ಪ್ರದಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಕೃಷಿ ಮೇಲೆ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಿಂದ ಹಾಲು ಹಾಗೂ ಹಾಲು ಉತ್ಪನ್ನಗಳನ್ನು ಆಮದು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವಿವರವಾದ ಪತ್ರವನ್ನು ಬರೆಯಲಾಗಿದೆ. ಹಾಲು ಉತ್ಪಾದಕರಿಗೆ ತೊಂದರೆ ಉಂಟಾಗುವ ಒಪ್ಪಂದ ಕೈಬಿಡುವ ಕುರಿತು 28 ಲೋಕಸಭಾ ಸದಸ್ಯರ ನಿಯೋಗದೊಂದಿಗೆ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಹಾಲು ಉತ್ಪಾದಕರಿಗೆ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇವೆಂದು ಭರವಸೆ ನೀಡಿದ್ದಾರೆ. 

ಸರ್ಕಾರ ರೈತರ ಏಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ನೀರಿನ ವ್ಯವಸ್ಥೆ ಸಿಗುವಂತಾಗಬೇಕು. 

ರಾಜ್ಯದಲ್ಲಿ ಶೇ.35ರಷ್ಟು ಮಾತ್ರ ನೀರಾವರಿ ಪ್ರದೇಶವಿದ್ದು, ಒಣ ಬೇಸಾಯದ ಮೇಲೆ ರೈತರು ಅವಲಂಬಿತರಾಗಿದ್ದಾರೆ. ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ರೈತ ಸಮ್ಮಾನ್ ಯೋಜನೆ ಮೂಲಕ ಮೂರು ಕಂತುಗಳಲ್ಲಿ ರೂ.6 ಸಾವಿರ ಕೃಷಿಕರಿಗೆ ನೀಡುತ್ತಿದೆ. ಇದೇ ಯೋಜನೆಯಡಿ ರಾಜ್ಯ ಸರ್ಕಾರವೂ 3 ಕಂತುಗಳಲ್ಲಿ ತಲಾ ರೂ.,2 ಸಾವಿರ ನೀಡುವಂತೆ ಯೋಜನೆ ರೂಪಿಸಿದ್ದು, ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದರಿಂದ ರೂ.25 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. 

2020ರ ಒಳಗಾಗಿ ರೈತರ ಆದಾಯ 2 ಪಟ್ಟು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಉದ್ದೇಶದಿಂದ ಕೇಂದ್ರ ಜಾರಿ ಮಾಡಿರುವ ಕೃಷಿ ವಿಕಾಸ್ ಯೋಜನೆ, ಜಾನುವಾರು ಯೋಜನೆ, ಜಲಶಕ್ತಿ ಯೋಜನೆಗಳ ಪ್ರಯಾಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು. 

ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು, ಬೆಳೆಯ ಅನಿಶ್ಚಿತತೆಯ ನಡುವೆಯೂ ರೈತರು ಬದುಕಿದ್ದಾರೆಂದರೆ, ಹೈನುಗಾರಿಕೆ ಕಾರಣ ಎಂದು ತಿಳಿಸಿದರು. 

SCROLL FOR NEXT