ರಾಜ್ಯ

ಕರಾವಳಿಯಲ್ಲಿ 'ಕ್ಯಾರ್' ಹಾವಳಿ, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥ

Raghavendra Adiga

ಮಂಗಳೂರು: ವಾಯುಭಾರ ಕುಸಿತದಿಂದ ಅರಬ್ಬಿ ಸಮುದದ್ರದಲ್ಲಿ ಎದ್ದಿರುವ ’ಕ್ಯಾರ್’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ
.
ಮಂಗಳೂರು, ಉಡುಪಿ, ಉತ್ತರ ಕನ್ನಡದ ವಿವಿಧೆಡೆ ಜನತೆ ಪರದಾಡುತ್ತಿದ್ದಾರೆ. ಸಮುದ್ರ ತೀರದ ಜನತೆ ಆತಂಕದಿಂದ ದಿನ ದೂಡುವಂತಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಸಮುದ್ರದ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇದರ ಪರಿಣಾಮ ಸಮುದ್ರ ತೀರದಲ್ಲಿ ವಾಸಿಸುತ್ತಿರುವವರಿಗೆ ಕಡಲ್ಕೊರೆತದ ಭೀತಿ ಆವರಿಸಿದೆ. ನದಿ, ಹೊಳೆ ಬದಿಯ ನಿವಾಸಿಗಳು ಜಾಗೃತವಾಗಿರುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ಮರಗಳು ಉರುಳಿ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕಿನಲ್ಲಿ ಮಳೆ ಪರಿಣಾಮ ೧೨ ಮನೆಗಳು ಹಾನಿಗೀಡಾಗಿವೆ. ಮಂಗಳೂರು ತಾಲೂಕಿನ ಸೋಮೇಶ್ವರ, ಉಚ್ಚಿಲ, ಉಳ್ಳಾಲ ಕೈಕೋ, ಸಸಿಹಿತ್ಲು ಮುಂತಾದ ಪ್ರದೇಶಗಳಲ್ಲಿ ತೀವ್ರ ಕಡಲ್ಕೊರೆತ ಸಂಭವಿಸಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕರಾವಳಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ೧೦೦ ಕ್ಕೂ ಅಧಿಕ ಬೋಟ್ ಗಳಿಗೆ ನವಮಂಗಳೂರು ಬಂದರಿನ ಸುರಕ್ಷಿತ ವಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮೀನುಗಾರಿಕೆಯಲ್ಲಿ ತೊಡಗಿದ್ದ ೧೦೦ ಕ್ಕೂ ಹೆಚ್ಚು ಬೋಟ್ ಹಾಗೂ ಅದರಲ್ಲಿದ್ದ ೧೦೦೦ ಕ್ಕೂ ಅಧಿಕ ಮೀನುಗಾರರಿಗೆ ತಟ ರಕ್ಷಣಾ ಪಡೆಯ ಸಹಕಾರದಲ್ಲಿ ಆಶ್ರಯ ನೀಡಲಾಗಿದೆ.

ಎರಡನೇ ಶನಿವಾರ ಇಂದು ಮತ್ತು ನಾಳೆ ಭಾನುವಾರ ಎರಡೂ ದಿನ ರಜೆಯಿದ್ದರೂ, ಪ್ರವಾಹ ಪರಿಸ್ಥಿತಿ ಇರುವ ಕಾರಣ ಅಧಿಕಾರಿಗಳು ರಜೆ ತೆಗೆದುಕೊಳ್ಳದೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಯಾವುದೇ ಇಲಾಖೆಯ ಜಿಲ್ಲಾ ಉಪವಿಭಾಗ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ. 

SCROLL FOR NEXT