ರಾಜ್ಯ

ಪಠ್ಯಕ್ರಮದಲ್ಲಿ ಟಿಪ್ಪು ಪಠ್ಯ ಕೈಬಿಡುವ ವಿಚಾರ; ಮೂರು ದಿನದಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚನೆ

Srinivas Rao BV

ಬೆಂಗಳೂರು: ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ತೆಗೆದುಹಾಕುವ ಸಂಬಂಧ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆ ಕರೆದು ಮೂರು ದಿನದೊಳಗೆ ವರದಿ ಸಲ್ಲಿಸುವಂತೆ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರ ಸೂಚಿಸಿದೆ.
  
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಸಲ್ಲಿಸಿದ ಮನವಿಯ ಮೇರೆಗೆ ಸಚಿವರು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸೂಚನೆ ನೀಡಿದ್ದಾರೆ.
  
ಪಠ್ಯಪುಸ್ತಕ ರಚನಾ ಸಮಿತಿ ಸಭೆಗೆ ಈ ಶಾಸಕರನ್ನೂ ಆಹ್ವಾನಿಸಿ, ಈ ಪಠ್ಯದ ಅಗತ್ಯತೆ ಹಾಗೂ ಅದನ್ನು ಉಳಿಸಿಕೊಳ್ಳುವ ಇಲ್ಲವೇ ತೆಗೆದುಹಾಕುವ ಕುರಿತು ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಬೇಕು ಎಂದು ಸುರೇಶ್ ಕುಮಾರ್ ಸೂಚಿಸಿದ್ದಾರೆ. 
  
ಪಠ್ಯದಲ್ಲಿ ಟಿಪ್ಪು ಬದಲಿಗೆ ಮುಂದಿನ ಪೀಳಿಗೆಗೆ ದೇಶಪ್ರೇಮ, ರಾಷ್ಟ್ರಭಕ್ತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕು ಎಂದು ಶಾಸಕರು ಮನವಿ ಸಲ್ಲಿಸಿದ್ದರು. ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಬಾರಿ ಆಚರಣೆಯನ್ನು ಸರ್ಕಾರ ಕೈಬಿಟ್ಟಿದೆ. ಅದರ ಬೆನ್ನಲ್ಲೇ ಪಠ್ಯದಿಂದಲೂ ಟಿಪ್ಪು ಸುಲ್ತಾನ್‌ ಚರಿತ್ರೆಯನ್ನು ತೆಗೆಯಬೇಕೆಂಬ ಒತ್ತಾಯ ಆರಂಭಗೊಂಡಿದೆ.

SCROLL FOR NEXT