ರಾಜ್ಯ

ನೆರೆ ಪರಿಹಾರ ನೀಡಲು ವಿಫಲ: ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರ ನಿರ್ಧಾರ 

Sumana Upadhyaya

ಬೆಂಗಳೂರು:ಪ್ರವಾಹ ಮತ್ತು ಬರಗಾಲ ಪೀಡಿತ ಪ್ರದೇಶಗಳ ರೈತರ ಬಗ್ಗೆ ಸರ್ಕಾರ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ರೈತರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.


ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು ಈ  ತಿಂಗಳ ಆರಂಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದಾಗ ಮುಖ್ಯಮಂತ್ರಿಗಳು ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದಾಗಿ 15 ದಿನಗಳು ಕಳೆದರೂ ಕೂಡ ಪರಿಹಾರದ ಬಗ್ಗೆ ಸರ್ಕಾರದ ಕಡೆಯಿಂದ ಯಾವ ಕೆಲಸವೂ ಆಗಿಲ್ಲ. ಹೀಗಾಗಿ ಮುಂದಿನ ತಿಂಗಳು ನವೆಂಬರ್ 7ರಂದು ಗಾಂಧಿ ಪ್ರತಿಮೆ ಬಳಿಯಿಂದ ಮುಖ್ಯಮಂತ್ರಿ ನಿವಾಸದವರೆಗೆ ರೈತರು ಮೆರವಣಿಗೆ ಸಾಗಲು ನಿರ್ಧರಿಸಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.


ಈ ವರ್ಷ ರಾಜ್ಯದಲ್ಲಿ ಉಂಟಾದ ವ್ಯಾಪಕ ಮಳೆ ಮತ್ತು ಪ್ರವಾಹದಿಂದ ಸುಮಾರು 4 ಸಾವಿರದ 394 ಗ್ರಾಮಗಳು ಹಾನಿಗೀಡಾಗಿದ್ದು ಎರಡೂವರೆ ಲಕ್ಷ ಮನೆಗಳು ನಾಶವಾಗಿವೆ. ಒಟ್ಟಾರೆ 15 ಲಕ್ಷ ಕೃಷಿಭೂಮಿ ನಾಶವಾಗಿದೆ. ಹಲವು ಲಕ್ಷ ಎಕರೆ ಭೂಮಿಗಳಿಗೆ ಪ್ರವಾಹದಿಂದ ಇನ್ನು ಮುಂದೆ ಕೃಷಿ ಮಾಡಲು ತೊಂದರೆಯಾಗಿದೆ. ಈ ಭೂಮಿ ಮತ್ತೆ ಫಲವತ್ತತೆಯ ಕೃಷಿ ಭೂಮಿಯಾಗಿ ಪರಿವರ್ತನೆಯಾಗಲು ಹಲವು ವರ್ಷಗಳೇ ಬೇಕಾಗಿದೆ. ಹೀಗಿರುವಾಗ ಪರಿಹಾರ ಕಲ್ಪಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಎಷ್ಟು ಸರಿ ಎಂದು ಆರೋಪಿಸಿದರು. 

SCROLL FOR NEXT