ರಾಜ್ಯ

ವಿ.ಜಿ. ಸಿದ್ಧಾರ್ಥ್ ಅವರ ಪತ್ರದಲ್ಲಿನ ಸಹಿ ಅಸಲಿ: ತನಿಖೆಯಿಂದ ಬಹಿರಂಗ 

Sumana Upadhyaya

ಮಂಗಳೂರು: ಕೆಫೆ ಕಾಫಿ ಡೇ(ಸಿಸಿಡಿ)ಮಾಲೀಕ ವಿ ಜಿ ಸಿದ್ಧಾರ್ಥ್ ಅವರ ಸಹಿಯಿದ್ದ ಪತ್ರ ಮತ್ತು ಇತರ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷಾ ಪ್ರಶ್ನಾರ್ಹ ದಾಖಲೆ ವಿಭಾಗಕ್ಕೆ ತಪಾಸಣೆಗೆ ಕಳುಹಿಸಿದ್ದು ಅಲ್ಲಿ ಪರಿಶೀಲನೆ ನಡೆಸಿದಾಗ ಸಹಿ ಹೊಂದಿಕೆಯಾಗಿ ಅದು ಸಿದ್ಧಾರ್ಥ್ ಅವರದ್ದೇ ಸಹಿ ಎಂದು ದೃಢಪಟ್ಟಿದೆ. ಇದರಿಂದಾಗಿ ಕಳೆದ ಜುಲೈ 29ರಂದು ಸಿದ್ಧಾರ್ಥ್ ಅವರು ಕಾಣೆಯಾದ ನಂತರ ಸೋಷಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಕಂಪೆನಿಯ ಉದ್ಯೋಗಿಗಳನ್ನು ಸಂಬೋಧಿಸಿ ಅವರು ಬರೆದಿದ್ದರು ಎನ್ನಲಾಗಿದ್ದ ಪತ್ರದ ನಿಖರತೆಗೆ ಉತ್ತರ ಸಿಕ್ಕಿದೆ. 


ಸಿದ್ಧಾರ್ಥ್ ಅವರ ಸಾವಿನ ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ತಂಡ ಆಗಸ್ಟ್ ನಲ್ಲಿ ಹಲವು ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪ್ರಯೋಗಾಲಯದ ವರದಿ ಪ್ರಕಾರ ಸಿದ್ಧಾರ್ಥ್ ಅವರ ಸಹಿ ಮತ್ತು ಪತ್ರದ ಸಹಿಗೆ ಹೊಂದಿಕೆಯಾಗಿದ್ದು ಇನ್ನು ಶೇಕಡಾ 5ರಿಂದ 10ರಷ್ಟು ಮಾತ್ರ ತನಿಖೆ ಬಾಕಿಯಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ತಿಳಿಸಿದ್ದಾರೆ.


ಸಿದ್ಧಾರ್ಥ್ ಅವರ ಕಾಣೆಯ ನಂತರದ ಘಟನೆಯನ್ನು ಒಮ್ಮೆ ಮೆಲುಕು ಹಾಕಿ ನೋಡುವುದಾದರೆ, ಜುಲೈ 29ರಂದು ಅವರು ಕಾಣೆಯಾದ ನಂತರ ಅವರು ಹಾಕಿದ ಸಹಿ ಎಂದು ಹೇಳಲಾದ ಪತ್ರ ಸಾಕಷ್ಟು ವೈರಲ್ ಆಗಿತ್ತು. ಅದು ಅವರು ಕೆಫೆ ಕಾಫಿ ಡೇಯಲ್ಲಿನ ನೌಕರರನ್ನು ಉದ್ದೇಶಿಸಿ ಬರೆದ ಪತ್ರವಾಗಿತ್ತು. ಹಲವರು ಆ ಪತ್ರದ ಸತ್ಯಾಸತ್ಯತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. 


ನಂತರ ಪೊಲೀಸರು ಸಿದ್ಧಾರ್ಥ್ ಅವರು ಹಲವು ಸಹಿಗಳನ್ನು ಹಾಕಿದ್ದ ದಾಖಲೆಗಳನ್ನು ಅವರ ನಿವಾಸ ಮತ್ತು ಕಚೇರಿಯಿಂದ ಪಡೆದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಪರೀಕ್ಷೆ ನಂತರ ಎಲ್ಲಾ ಸಹಿಗಳು ಹೊಂದಿಕೆಯಾಗುತ್ತಿವೆ.

SCROLL FOR NEXT