ಹಾಸನ: ಕನಾ೯ಟಕ ರಾಜ್ಯದ ದೇವಸ್ಥಾನಗಳನ್ನು ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗುತ್ತಿದ್ದೆ ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ಬೇಲೂರು ಪಟ್ಟಣದ ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಕನಾ೯ಟಕವನ್ನು ವಿಶ್ವ ಪ್ರವಾಸಿ ಕೇಂದ್ರವಾಗಿ ಬದಲಾವಣೆ ಮಾಡುತ್ತೇವೆ. ಕನ್ನಡದ ಮೊದಲ ಶಾಸನ ಪತ್ತೆಯಾದ ಬೇಲೂರಿನ ಹಲ್ಮಿಡಿ ಗ್ರಾಮ ಹಾಗೂ ಹಾಸನ ನಗರದ ಹಾಸನಾಂಬ ಕಲಾಭವನವನ್ನು ಅಭಿವೃದ್ಧಿ ಪಡಿಸಲು ತಾವು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ದೇವಾಲಯಗಳನ್ನು, ಪ್ರವಾಸಿ ಕೇಂದ್ರಗಳನ್ನೂ ಖುದ್ದಾಗಿ ತೆರಳಿ ಪರಿಶೀಲಿಸುತ್ತೇನೆ ಎಂದ ಸಚಿವರು ಕರ್ನಾಟಕಕ್ಕೆ ವಿಶ್ವದರ್ಜೆಯ ಪ್ರವಾಸಿ ತಾಣದ ಸ್ಥಾನಮಾನ ದೊರಕಿಸಿಕೊಡುವ ಪ್ರಯತ್ನ ನಡೆಸುವೆ ಎಂದಿದ್ದಾರೆ.
ಕೆಎಂಎಫ್ ಕುರಿತಾದ ಎಚ್.ಡಿ. ರೇವಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಸಿಟಿ ರವಿ "ಕೆಎಂಎಫ್ ಎಂಬತ್ತು ಲಕ್ಷ ಮಂದಿಗೆ ಉದ್ಯೋಗ ನೀಡಿದ್ದು ಈ ಸಂಸ್ಥೆಯ ಬಗ್ಗೆ ಹಗುರಾಗಿ ಮಾತನಾಡುವುದು ಸರಿಯಲ್ಲ. ರೇವಣ್ಣ ಯಾವ ಅರ್ಥವನ್ನಿಟ್ಟು ಮಾತನಾಡಿದ್ದಾರೆ ನನಗೆ ತಿಳಿದಿಲ್ಲ" ಎಂದರು.
ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ ಬಗ್ಗೆ ತಾವು ಸಾರ್ವಜನಿಕವಾಗಿ ಹೇಳಲು ಬಯಸಲ್ಲ. ನಮ್ಮ ಪಕ್ಷದಲ್ಲಿ ಯಾರು ಯಾವ ಸ್ಥಾನವನ್ನೂ ಪಡೆಯಲು ಅವಕಾಶವಿದೆ. ಪತ್ರಕರ್ತರೊಬ್ಬರು ಸಂಸದರಾಗಿರುವುದು ಇದಕ್ಕೆ ಸಾಕ್ಷಿ ಎಂದಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಅವರ ಇಡಿ ವಿಚಾರಣೆ ಬಗೆಗೆ ಮಾತನಾಡಿದ ಸಚಿವರು ಕಾನೂನಿನ ಮುಂದೆ ಎಲ್ಲರೂ ಸಮಾನರು. ಅವರು ಯಾವ ಪಕ್ಷದವರಾದರೂ ಸರಿ ಕಾನೂನಿನಡಿ ಎಲ್ಲವನ್ನೂ ಎದುರಿಸಬೇಕು ಎಂದರು.