ರಾಜ್ಯ

ಜೋಡಿ ಕೊಲೆ ಆರೋಪಿ, ರೌಡಿ ವಿನೋದ್ ಕಾಲಿಗೆ ಗುಂಡಿಕ್ಕಿ ಬಂಧನ

Srinivasamurthy VN

ಬೆಂಗಳೂರು: ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ರೌಡಿ ವಿನೋದ್ ಕುಮಾರ್ ಅಲಿಯಾಸ್ ಕೋತಿ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 25ರಂದು ರಾತ್ರಿ ತನ್ನ ಸಹಚರರೊಂದಿಗೆ ಸೇರಿಕೊಂಡು ರೌಡಿ ಮಂಜುನಾಥ ಅಲಿಯಾಸ್ ಮಂಜ ಹಾಗೂ ಆತನ ಸಹಚರ ವರುಣ ಎಂಬವರನ್ನು ಮಾರಕಾಸ್ತ್ರಗಳಿಂದ ಜೋಡಿ ಕೊಲೆ ಮಾಡಿ ಕೋತಿ ತಲೆ ಮರೆಸಿಕೊಂಡಿದ್ದ. ಈತ ಕುಮಾರಸ್ವಾಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ಅಪಹರಣ, ಹಲ್ಲೆ, ದರೋಡೆಗೆ ಸಂಚು ಮುಂತಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರಿಗೆ ಬೇಕಾಗಿದ್ದ. ಈತನ ಬಂಧನಕ್ಕೆ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ರೋಹಿಣಿ ಕಟೋಚ್ ಸೆಪಟ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಯ ಪತ್ತೆಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ತಲಘಟ್ಟಪುರದ ನಾಗೇಗೌಡನ ಪಾಳ್ಯದಲ್ಲಿ ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದಿದೆ.

ಆರೋಪಿ ವಿನೋದ್ ಕುಮಾರ್ ಎರಿಟಿಗಾ ಕಾರಿನಲ್ಲಿ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ವಿಶೇಷ ತಂಡ ಆತನ ಬಂಧನಕ್ಕೆ ತೆರಳಿದೆ. ನಾಗೇಗೌಡನ ಪಾಳ್ಯದಲ್ಲಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಅವರು ಆರೋಪಿ ಕೋತಿಯನ್ನು ಬಂಧಿಸಲು ಮುಂದಾದಾಗ ಸಿಬ್ಬಂದಿ ಮೇಲೆ ಖಾರದ ಪುಡಿಯನ್ನು ಎರಚಿ ಅವರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಾಕುವಿನಿಂದ ಸಿಬ್ಬಂದಿಯ ಮೇಲೆರಗಿ ಎಡಭುಜಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸಿಬ್ಬಂದಿ ಪ್ರದೀಪ್‍ ಅವರಿಗೆ ತೀವ್ರ ಗಾಯಗಳಾಗಿವೆ. ತಕ್ಷಣ ಪಿಎಸ್ಐ ನಾಗೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ಶರಣಾಗಲು ನಿರಾಕರಿಸಿ ಮತ್ತೆ ಹಲ್ಲೆಗೆ ಯತ್ನಿಸಿದಾಗ ನಾಗೇಶ್ ಅವರು ಆತ್ಮರಕ್ಷಣೆಯ ಉದ್ದೇಶದಿಂದ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಕುಸಿದು ಬಿದ್ದ ಆತನನ್ನು ಸುತ್ತುವರಿದು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಪ್ರದೀಪ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ಜೊತೆಗಿದ್ದ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ. ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆಗೆ ಯತ್ನಿಸಿದ ಆರೋಪಗಳಡಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ 307, 353 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಗುಂಡೇಟಿಗೆ ಒಳಗಾಗಿರುವ ಆರೋಪಿ ವಿನೋದ್ ಕುಮಾರ್ ಅಲಿಯಾಸ್ ವಿನೋದ್ ಅಲಿಯಾಸ್ ಕೋತಿ ವಿರುದ್ಧ ಜೆ ಪಿ ನಗರ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, ಅಪಹರಣ, ಹಲ್ಲೆ, ದರೋಡೆಗೆ ಸಿದ್ಧತೆ ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ವಿಶೇಷ ತಂಡದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಮಹದೇವ ಟಿ, ತಲಘಟ್ಟಪುರ ಪೊಲೀಸ್ ಠಾಣೆಯ ಪಿ ಐ ವಿಜಯಕುಮಾರ್, ಪಿಎಸ್ಐಗಳಾದ ನಾಗೇಶ್, ಸುಬ್ರಮಣಿ ಕೆ.ಆರ್. ರಘುನಾಯ್ಕ್, ಸಿಬ್ಬಂದಿಗಳಾದ ಶಿವಮೂರ್ತಿ, ಪ್ರದೀಪ್, ಮಹೇಶ್ ಇದ್ದರು.

SCROLL FOR NEXT