ರಾಜ್ಯ

ಏಮ್ಸ್ ಆಸ್ಪತ್ರೆ ಮಾದರಿಯ ರಕ್ತ ಪರೀಕ್ಷೆ ತಂತ್ರಜ್ಞಾನ ರಾಜ್ಯದಲ್ಲೂ ಅಳವಡಿಕೆ: ಆರೋಗ್ಯ ಸಚಿವ ಶ್ರೀರಾಮುಲು 

Manjula VN

ಬೆಂಗಳೂರು: ರಾಜ್ಯದ ಸರ್ಕಾರಿ ಅಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಲು ಗಮನ ಹರಿಸಲಾಗುವುದು. ದೆಹಲಿಯ ಏಮ್ಸ್ ಆಸ್ಪತ್ರೆ ಮಾದರಿಯಲ್ಲಿ ಒಂದು ಬಾರಿ ರಕ್ತ ಪಡೆದರೆ 16ಕ್ಕೂ ಹೆಚ್ಚು ಪರೀಕ್ಷೆಗಳ ತಂತ್ರಜ್ಞಾನ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಗುರುವಾರ ಪೂಜೆ ಸಲ್ಲಿಸಿ, ಕಾರ್ಯಾರಂಭ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ, ಇಲ್ಲಿ ಅನೇಕ ಸಮಸ್ಯೆಗಳಿವೆ, ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಔಷಧಿ ಖರೀದಿಯಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದರು.

ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ, ತಾವು ಸಂಸದನಾಗಿದ್ದ ವೇಳೆ ಅಲ್ಲಿಗೆ ಭೇಟಿದ್ದೆ. ಅಲ್ಲಿ ಒಂದು ಬಾರಿ ರಕ್ತದ ಮಾದರಿ ನೀಡಿದರೆ ಎಲ್ಲಾ ಖಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಇಂತಹ ತಂತ್ರಜ್ಞಾನವನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲೂ ತರುವ ಯೋಚನೆ ತಮಗಿದೆ ಎಂದು ಹೇಳಿದರು.

SCROLL FOR NEXT