ರಾಜ್ಯ

ದಂಡ ಕಟ್ಟು ಎಂದಿದ್ದಕ್ಕೆ ಎಸ್ಐಎಗೇ ಪಂಚ್ ಕೊಟ್ಟ ಸವಾರ!

Manjula VN

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಿದ ಸಹಾಯಕ ಪೊಲೀಸ್ ಇನ್ಸ್'ಪೆಕ್ಟರ್ ಒಬ್ಬರ ಮೇಲೆ ಸವಾರನೊಬ್ಬ ಹಲ್ಲೆ ನಡೆಸಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. 

ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ.ಲಿಂಗಯ್ಯ (58) ಹಲ್ಲೆಗೊಳಗಾದವರಾಗಿದ್ದಾರೆ. ಈ ಸಂಬಂಧ ಭುವನೇಶ್ವರಿ ನಗರದ ನಿವಾಸಿ ಲಿಂಗರಾಜು (40) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಎಎಸ್ಐ ಬಿ. ಲಿಂಗಯ್ಯ ಅವರು ಸೆ.3 ರಂದು ಇಟ್ಟಮಡು ಜಂಕ್ಷನ್ ಜನತಾ ಬಜಾರ್ ಸಮೀಪ ಕರ್ತವ್ಯ ನಿಯೋಜನೆಗೊಂಡಿದ್ದರು. ಸಂಜೆ 5.30ರ ಸುಮಾರಿಗೆ ಜನತಾ ಬಜಾರ್ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಮೂವರು ವ್ಯಕ್ತಿಗಳು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. 

ಎಎಸ್ಐ ಜೊತೆಗಿದ್ದ ಪೇದೆ ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನವನ್ನು ತಡೆದು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಮೂವರ ಪೈಕಿ ಆರೋಪಿ ಲಿಂಗರಾಜು ತನ್ನ ಮಾನ ಹೈಗ್ರೌಂಡ್ ಠಾಣೆಯಲ್ಲಿ ಪೊಲೀಸ್, ಅವರ ಬಳಿ ಮಾತನಾಡಿ ಎಂದಿದ್ದ. ಇದಕ್ಕೆ ಸೊಪ್ಪು ಹಾಕದ ಎಎಸ್ಐ ಲಿಂಗಯ್ಯ ಅವರು ದಂಡ ಕಟ್ಟಲೇಬೇಕು ಎಂದು ಹೇಳಿದ್ದಾರೆ. 

ಈ ವೇಳೆ ಆರೋಪಿ ಮತ್ತು ಎಎಸ್ಐ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಆರೋಪಿ ಏಕಾಏಕಿ ಎಎಸ್ಐ ಅವರನ್ನು ಅವಾಚ್ಯ ಶಬ್ಧದಿಂದ ನಿಂದಿಸಿ ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾನೆ. ಹಲ್ಲೆಯಿಂದಾಗಿ ಎಎಸ್ಐ ಮೂಗಿನಲ್ಲಿ ರಕ್ತಸ್ರಾವವಾಗಿದ್ದು, ಕೂಡಲೇ ಗಾಯಾಳುವನ್ನು ಜೊತೆಗಿತ್ತ ಪೇದೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಎಎಸ್ಐ ಕೊಟ್ಟ ದೂರಿನ ಮೇರೆಗೆ ಆರೋಪಿ ಲಿಂಗರಾಜುನ್ನು ಬಂಧಿಸಿ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಚಾಲಕನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 

SCROLL FOR NEXT