ರಾಜ್ಯ

4 ಲಕ್ಷ ಕ್ಯೂಸೆಕ್ಸ್ ಗಿಂತ ಹೆಚ್ಚು ನೀರು ಬಂದಾಗ ಮಾತ್ರ ಕೃಷ್ಣಾ ನದಿಯಲ್ಲಿ ಅಪಾಯ: ಲಕ್ಷ್ಮಣ ಸವದಿ

Sumana Upadhyaya

ರಾಮದುರ್ಗದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಗ್ರಾಮಸ್ಥ 

ಬೆಳಗಾವಿ: ಇತ್ತೀಚಿನ ತೀವ್ರ ಪ್ರವಾಹದ ನಂತರ ಉತ್ತರ ಕರ್ನಾಟಕದ ಜಿಲ್ಲೆಗಳು ಸಹಜ ಸ್ಥಿತಿಗೆ ಬರುತ್ತಿದ್ದಂತೆ ಕೃಷ್ಣಾ ನದಿ ತೀರದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಬರುವ ಮುನ್ನೆಚ್ಚರಿಕೆ ನೀಡಲಾಗಿದೆ. ನಿನ್ನೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಯ ಅಣೆಕಟ್ಟಿನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದೆ.


ಮಹಾರಾಷ್ಟ್ರ ಸರ್ಕಾರದಿಂದ ಎಚ್ಚರಿಕೆಯ ಸಂದೇಶ ಬರುತ್ತಿದ್ದಂತೆ ಬೆಳಗಾವಿ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ, ಕೃಷ್ಣಾ ನದಿ ತೀರದಲ್ಲಿರುವ ಜನರು ತಮ್ಮ ಜಾನುವಾರುಗಳು ಮತ್ತು ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ.


ಈ ಮಧ್ಯೆ ನಿನ್ನೆ ಸಂಜೆ ಮಲಪ್ರಭಾ ಹತ್ತಿರ ರಾಮದುರ್ಗದಲ್ಲಿ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಗ್ರಾಮಸ್ಥರೊಬ್ಬರು ಕೊಚ್ಚಿ ಹೋಗಿದ್ದಾರೆ. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮದರ್ಸಾಬ್ ಜಂಗಿಸಾಬ್ ಮಕಂದರ್ ಎಂದು ಅವರನ್ನು ಗುರುತಿಸಲಾಗಿದೆ. ಮಲಪ್ರಭಾ ನದಿಯನ್ನು ಜುನಿಪೆಟ್ ಗ್ರಾಮದಲ್ಲಿ ದಾಟುತ್ತಿದ್ದ ವೇಳೆ ರಭಸವಾದ ನೀರಿಗೆ ಕೊಚ್ಚಿ ಹೋಗಿದ್ದಾರೆ. ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.


ಅಣೆಕಟ್ಟುಗಳಲ್ಲಿ ನೀರು ಉಕ್ಕಿ ಹರಿಯುವುದನ್ನು ತಡೆಯಲು ಕೊಯ್ನಾ, ಮಹಾರಾಷ್ಟ್ರಗಳಿಂದ ಕೃಷ್ಣಾ ನದಿಗೆ 1.5 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಅದು 2 ಲಕ್ಷ ಕ್ಯೂಸೆಕ್ಸ್ ಮೀರುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಕೊಲ್ಹಾಪುರದ ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಲಮಟ್ಟಿ, ಹಿಪ್ಪರಗಿ ಅಣೆಕಟ್ಟುಗಳ ಹೊರಹರಿವು ಮತ್ತು ಒಳಹರಿವುಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಹೇಳಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಸಂಜೆಯವರೆಗೆ ಸುಮಾರು 1.70 ಲಕ್ಷ ಕ್ಯೂಸೆಕ್ಸ್ ನೀರು ಬರಬಹುದು. ಸುಮಾರು ಎರಡು ಲಕ್ಷ ಕ್ಯೂಸೆಕ್ಸ್ ವರೆಗೆ ನೀರು ಬಿಡುಗಡೆಯಾದರೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.


ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕೂಡ ಕೃಷ್ಣಾ ನದಿ ಪಾತ್ರದಲ್ಲೇ ವಾಸ ಮಾಡುತ್ತಿರುವ ವ್ಯಕ್ತಿ. ಈಗಾಗಲೇ ಆಲಮಟ್ಟಿ ಜಲಾಶಯದಿಂದ ಸುಮಾರು 1.50 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟು ಹೆಚ್ಚುವರಿಯಾಗಿ ಬರುವ ನೀರು ಸಂಗ್ರಹ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ‌. 4 ಲಕ್ಷ ಕ್ಯೂಸೆಕ್ಸ್ ಗಿಂತ ಹೆಚ್ಚು ನೀರು ಬಂದಾಗ ಮಾತ್ರ ಕೃಷ್ಣಾ ನದಿಯಲ್ಲಿ ಅಪಾಯಮಟ್ಟ ತಲುಪುತ್ತದೆ. ಈಗ ಜನ ಆತಂಕ ಪಡುವ ಅಗತ್ಯವಿಲ್ಲ. ಆದರೂ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ‌. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು  ಲಕ್ಷ್ಮಣ ಸವದಿ ಹೇಳಿದ್ದಾರೆ.


ಪರಿಹಾರ ವಿತರಣೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಆರ್.ಟಿ.ಜಿ.ಎಸ್ ಮೂಲಕ ಅರ್ಹರಿಗೆ ನೇರವಾಗಿ ಪರಿಹಾರ ನೀಡಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ, ಈ ಬಗ್ಗೆ ಮಾಸಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು ಎಂದು ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.

SCROLL FOR NEXT