ರಾಜ್ಯ

15 ದಿನಗಳ ಅಂತರದಲ್ಲಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಬಿರುಕು

Srinivasamurthy VN

ಮಡಿಕೇರಿ: ಕೊಡವರ ಪವಿತ್ರ ತಾಣ, ಪ್ರವಾಸಿಗರ ನೆಚ್ಚಿನ ತಾಣ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.

ಕಳೆದ 15 ದಿನಗಳ ಹಿಂದೆ ಭಾರಿ ಮಳೆಯಿಂದಾಗಿ ಕಾವೇರಿ ತಾಯಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಳಿಕ ಮಳೆ ಪ್ರಮಾಣ ತಗ್ಗಿದಂತೆಯೇ ಬಿರುಕು ಕೂಡ ಮುಚ್ಚಲ್ಪಟ್ಟಿತ್ತು.  ಈ ಹಿನ್ನೆಲೆಯಲ್ಲಿ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು.  ಆದರೀಗ ಮತ್ತೆ ಈ ಬೆಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು 15 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಬಿರುಕಿಗಿಂತಲೂ ದೊಡ್ಡದಾಗಿದೆ ಎಂದು ಇಲ್ಲಿನ ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ಸ್ಥಳೀಯರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ತಲಕಾವೇರಿಯಿಂದ ಒಂದು ಕಿ.ಮೀ ಮುಂದೆ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದು, ಇದರಿಂದಲೇ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ ಈ ಹಿಂದೆ ಅಂದರೆ 2014ರಲ್ಲಿ ಸಾರ್ವಜನಿಕರ ಅಭಿಪ್ರಾಯದಂತೆ ಅರಣ್ಯ ಇಲಾಖೆಯಿಂದ ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ಅಲ್ಲಲ್ಲಿ ತೆಗೆಯಲಾಯಿತು. ಅಲ್ಲದೆ ಅರಣ್ಯ ಸಸಿಗಳನ್ನು ನೆಡಲಾಯಿತು. ಅರಣ್ಯ-ತೋಪು ಮತ್ತು ಇಂಗು ಗುಂಡಿಗಳ ಸಲುವಾಗಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಇದೇ ರೀತಿಯ ಕಾರ್ಯ 2016ರವರೆಗೂ ಮುಂದುವರಿಯಿತು. ಬ್ರಹ್ಮಗಿರಿ ಬೆಟ್ಟದಲ್ಲಿ ಈ ಯಂತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ನೆಲದ ಮಣ್ಣಿನ ಪದರ ಸಡಿಲಗೊಂಡು ಈಗಿನ ಮಳೆಯ ಸಂದರ್ಭ ಬೆಟ್ಟ ಬಿರುಕು ಬಿಟ್ಟು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

15 ದಿನಗಳ ಹಿಂದೆಯೂ ಭೂಮಿ ಬಿರುಕು ಬಿಟ್ಟಿದ್ದು, ಈಗ ಮತ್ತೆ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಮಿ ಬಿರುಕುಬಿಟ್ಟಿದೆ. ಬೆಟ್ಟದ ಮೇಲ್ಭಾಗದಲ್ಲಿ 10 ಅಡಿಗೂ ಹೆಚ್ಚು ಉದ್ದ ಆಳದ ಕಂದಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಕಾವೇರಿ ತಾಯಿಯ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

SCROLL FOR NEXT