ರಾಜ್ಯ

ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ರಾಜ್ಯದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ

Srinivas Rao BV

ಬೆಂಗಳೂರು: ಮಹಾರಾಷ್ಟ್ರದಲ್ಲಿನ ಕೃಷ್ಣಾ ನದಿಯ ಮೇಲ್ದಂಡೆ ಜಲಾಶಯಗಳಿಂದ ಹೊರಹರಿವು ಅಲ್ಪ ಪ್ರಮಾಣದಲ್ಲಿ ಕುಸಿದಿದ್ದರೂ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವಿವಿಧ ನದಿಗಳು ತುಂಬಿ ಹರಿಯುತ್ತಿರುವುದರಿಂದ ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರೆಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರೆದಿದೆ. 
  
ಮಹಾರಾಷ್ಟ್ರದ ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳಿಂದ ಹೊರಹರಿವು ಸ್ವಲ್ಪ ಕಡಿಮೆಯಾಗಿರುವುದರಿಂದ ಕೃಷ್ಣಾ  ನದಿಯಲ್ಲಿ ಪ್ರವಾಹ ಮಟ್ಟ ಸ್ವಲ್ಪ ಸುಧಾರಿಸಿದ್ದು, ಇದರಿಂದ   ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಕೆಳಭಾಗದ ಯಾದಗಿರಿ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜನರು ತುಸು ನಿರಾಳರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
  
ಆದರೂ, ಪಶ್ವಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟ್ಟಗಳಲ್ಲಿ ಹುಟ್ಟುವ ನದಿಗಳಾದ ಘಟಪ್ರಭಾ, ಮಲಪ್ರಭಾ, ದೂಧ್‍ ಗಂಗಾ, ತುಂಗಾ ಮತ್ತು ಭದ್ರಾ, ನೇತ್ರಾವತಿ, ಕಾವೇರಿ ಮತ್ತು ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ.
 ಈ ಮಧ್ಯೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಅಥಣಿ ತಾಲ್ಲೂಕುಗಳಲ್ಲಿ ಕೃಷ್ಣಾ ಮತ್ತು ಇತರ ನದಿಗಳ ಪ್ರವಾಹದ ಮಟ್ಟ ಸ್ವಲ್ಪ ಕಡಿಮೆಯಾಗಿದೆ. ಚಿಕ್ಕೋಡಿ ಮತ್ತು ಅಥಣಿ ತಾಲ್ಲೂಕುಗಳಲ್ಲಿ ಐದರಿಂದ ಆರು ಸೇತುವೆಗಳ ಮೇಲೆ ನೀರು ಹರಿಯುತ್ತಿತ್ತು. ಇದೀಗ ನೀರಿನ ಮಟ್ಟ ಕ್ರಮೇಣ ಇಳಿಯುತ್ತಿದೆ. ಮುಳುಗಿರುವ ಸೇತುವೆಗಳನ್ನು ಇಂದು ಇಲ್ಲವೇ ನಾಳೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
  
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಭಾರೀಯಿಂದ  ಭಾರೀ ಮಳೆಯಾಗುತ್ತಲೇ ಇದೆ ಎಂದು ಮಡಿಕೇರಿ ವರದಿ ತಿಳಿಸಿದೆ. ಭಾಗಮಂಡಲ ಮತ್ತು ತ್ರಿವೇಣಿ ಸಂಗಮದಲ್ಲಿನ ನೀರಿನ ಮಟ್ಟ ಸ್ಥಿರವಾಗಿ ಏರುತ್ತಲೇ ಇದ್ದು, ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಿದೆ. ಇದರಿಂದ. ಭಾಗಮಂಡಲ-ಮಡಿಕೇರಿ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಕಾವೇರಿ ನದಿ ಉಗಮ ಸ್ಥಳವಾದ ತಲಕಾವೇರಿ ಇರುವ ಬ್ರಹ್ಮಗಿರಿ ಬೆಟ್ಟಗಳ ಮೇಲೆ ಬಿರುಕು ಕಾಣಿಸಿಕೊಂಡಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಬೆಟ್ಟದ ಮೇಲೆ ಎರಡು ಅಡಿ ಆಳ ಮತ್ತು ಒಂದು ಅಡಿ ಅಗಲದ ಬಿರುಕು ಗಮನಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭಾರೀ ಭೂಕುಸಿತಗಳಿಗೆ ಇದು ಸಾಕ್ಷಿಯಾಗಿದೆ. ಮಳೆನೀರು ಹರಿಯದಂತೆ ತಡೆಯಲು ಬಿರುಕುಗಳನ್ನು ಜಲನಿರೋಧಕ ವಸ್ತುಗಳು, ಮರಳು ಮತ್ತು ಕಾಂಕ್ರಿಟ್‍ನಿಂದ ಮುಚ್ಚಲಾಗುತ್ತಿದೆ  ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ವಿರಾಮ ನೀಡಿದ್ದ ಬಿರುಸಿನ ಮುಂಗಾರು  ಕಳೆದ ವಾರ ಮತ್ತೆ ಚುರುಕಾಗಿದೆ. ಸದ್ಯ, ಮಹಾರಾಷ್ಟ್ರದ ಕೊಯ್ನಾ, ವಾರ್ನಾ, ಧೋಮ್, ಕನ್ಹೇರ್, ಉರ್ಮೋಡಿ, ತಾರಾಲಿ ಅಣೆಕಟ್ಟೆಗಳಿಂದ ನೀರಿನ ಹೊರಹರಿವು ಸೋಮವಾರ ಬೆಳಿಗ್ಗೆ 6 ಗಂಟೆಗೆ 83,879 ಕ್ಯೂಸೆಕ್‌ಗಳಿಗೆ ಇಳಿದಿದೆ ಎಂದು ಬೆಳಗಾವಿ ವರದಿಯೊಂದು ತಿಳಿಸಿದೆ. ರಾಧಾನಗರಿ, ಕುಂಭಿ ಕಸಾರಿ, ಕಡವಿ, ತುಲಸಿ ಅಣೆಕಟ್ಟುಗಳಿಂದ 9420 ಕ್ಯೂಸೆಕ್‌ ಹೊರಹರಿವಿತ್ತು. ಮಾರ್ಕಂಡೇಯ, ಹಿರಣ್ಯಕೇಶಿ, ಹಿಡಕಲ್‍, ನವಿಲುತೀರ್ಥ ನದಿಗಳು  ಪೂರ್ಣ ಮಟ್ಟ ತಲುಪಿವೆ, ಸದ್ಯ,ಆಲಮಟ್ಟಿ ಜಲಾಶಕ್ಕೆ ಒಳಹರಿವು 1,88,500 ಕ್ಯೂಸೆಕ್ ನಷ್ಟಿದ್ದು, ನದಿಗೆ ಹೊರಹರಿವು 2,50,000 ಕ್ಯೂಸೆಕ್‍ನಷ್ಟಿದೆ.  ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತ ದಿನದ 24 ತಾಸು ಎಚ್ಚರಿಕೆ ನೀಡಿದ್ದು, ಎಲ್ಲ ಅಗತ್ಯ ರಕ್ಷಣಾ ಪಡೆ ಮತ್ತು ಉಪಕರಣಗಳೊಂದಿಗೆ ಸಜ್ಜಾಗಿದೆ.

SCROLL FOR NEXT