ರಾಜ್ಯ

ಕೃಷಿಭಾಗ್ಯ ಯೋಜನೆ ವಿವಾದ: ತನಿಖೆಗೆ ಆದೇಶಿಸಿದ ಬಿಎಸ್ ವೈ ಸರ್ಕಾರ

Srinivasamurthy VN

ಕೃಷಿ ಭಾಗ್ಯ, ಕಸ ನಿರ್ವಹಣೆ ಸೇರಿ 5 ಪ್ರಕರಣಗಳ ತನಿಖೆ, ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದ್ದ ಕೃಷಿ ಭಾಗ್ಯ

ಬೆಂಗಳೂರು: ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದ್ದ ಕೃಷಿ ಭಾಗ್ಯ ಯೋಜನೆಯಲ್ಲಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.

ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ಐದು ಯೋಜನೆಗಳಲ್ಲಿ ಅಕ್ರಮ ನಡೆದಿರುವ ಶಂಕೆ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ 2014-15ರಲ್ಲಿ ಆರಂಭಗೊಂಡ 921 ಕೋಟಿ ರೂ. ಮೊತ್ತದ ಕೃಷಿ ಭಾಗ್ಯ ಯೋಜನೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ತನಿಖೆಗೆ ಪ್ರತ್ಯೇಕ ಆದೇಶ ಹೊರಡಿಸಲಾಗಿದೆ.

ಬೆಂಗಳೂರಿನ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಕೃಷಿ ಭಾಗ್ಯ ಯೋಜನೆ ಹಾಗೂ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಈಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇವುಗಳ ಕುರಿತು ಸಮಗ್ರ ತನಿಖೆ ನಡೆಸಿ ಎರಡು ತಿಂಗಳೊಳಗಾಗಿ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಸೂಚಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಚಾಲನೆ (ಸಂಗ್ರಹ ಚಿತ್ರ)

ಯಾವ್ಯಾವ ಪ್ರಕರಣಗಳು ?

  • 921 ಕೋಟಿ ರೂ. ಮೊತ್ತದ ಕೃಷಿ ಭಾಗ್ಯ ಯೋಜನೆ
  • 1067 ಕೋಟಿ ರೂ. ಮೊತ್ತದ ತ್ಯಾಜ್ಯ ವಿಲೇವಾರಿ
  • 410 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವೈಜ್ಞಾನಿಕ ಸಂಸ್ಕರಣಾ ಘಟಕ ನಿರ್ಮಾಣ
  • ನೂರಾರು ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನಿರ್ವಹಣೆ
  • ನೂರಾರು ಕೋಟಿ ರೂ. ವೆಚ್ಚದಲ್ಲಿ ಕ್ವಾರೆಗಳಿಗೆ ಲೈನರ್ ಅಳವಡಿಕೆ

ಏನಿದು ಪ್ರಕರಣ?
ಕರ್ನಾಟಕದ ಶೇ.66 ಕೃಷಿ ಪ್ರದೇಶ ಮಳೆ ಆಧಾರಿತವಾಗಿದೆ. ಮಳೆ ಅವಲಂಬಿತ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳಲು ಕೃಷಿ ಹೊಂಡಗಳ ನಿರ್ವಣ, ಪಾಲಿಥಿನ್ ಹೊದಿಕೆ, ನೆರಳು ಪರದೆ, ಡೀಸಲ್ ಪಂಪ್​ಗಳ ಅಳವಡಿಕೆ ಮುಂತಾದ ಸವಲತ್ತುಗಳನ್ನು ಒದಗಿಸುವ ಸಲುವಾಗಿ 2014-15ರಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು.

ಆದರೆ ಈ ಯೋಜನೆಯಲ್ಲಿ ಹಲವು ಗುರುತರ ಆರೋಪಗಳು ಕೇಳಿ ಬಂದಿದ್ದು, ಕೃಷಿ ಭಾಗ್ಯ ಯೋಜನೆಯಡಿ 2014-15ರಿಂದ 2017-18ರವರೆಗೆ ರಾಜ್ಯದ 131 ತಾಲೂಕುಗಳಲ್ಲಿ 2,15,130 ಕೃಷಿ ಹೊಂಡಗಳನ್ನು ನಿರ್ವಿುಸಲಾಗಿದೆ. ಇದಕ್ಕಾಗಿ 821,16,23,000 ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಆದರೆ ಈ ಮಾಹಿತಿ ಮೇಲ್ನೋಟಕ್ಕೆ ಸರಿಯಿಲ್ಲ ಮತ್ತು ಹಲವು ಕಡೆ ಕೃಷಿ ಹೊಂಡ ನಿರ್ಮಾಣ ಮಾಡಿಲ್ಲ ಎಂಬ ದೂರು ಕೇಳಿಬಂದಿತ್ತು. ಬಿಬಿಎಂಪಿ ವರ್ಷವೊಂದಕ್ಕೆ ತ್ಯಾಜ್ಯ ವಿಲೇವಾರಿಗೆ 1067 ಕೋಟಿ ರೂ.ಗಳನ್ನು ಬಿಬಿಎಂಪಿ ವೆಚ್ಚ ಮಾಡುತ್ತಿದೆ. ಸುಮಾರು 410 ಕೋಟಿ ರೂ.ದಲ್ಲಿ ಏಳು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಬಹುತೇಕ ಘಟಕಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಮೆಕ್ಯಾನಿಕಲ್, ಸ್ವೀಪರ್​ಗಳು ಮತ್ತು ಕಾಂಪ್ಯಾಕ್ಟರ್​ಗಳ ಖರೀದಿ ಹಾಗೂ ನಿರ್ವಹಣೆಗೆ ನೂರಾರು ಕೋಟಿ ರೂ. ಅನಗತ್ಯ ವೆಚ್ಚ ಮಾಡಲಾಗಿದೆ. ಬಾಗಲೂರು, ಮಿಟ್ಟಗಾನಹಳ್ಳಿ, ಬೆಳ್ಳಳ್ಳಿ ಕ್ವಾರಿಗಳಿಗೆ ನೂರಾರು ಕೋಟಿ ರೂ. ವೆಚ್ಚ ಮಾಡಿ ಅಂತಾರಾಷ್ಟ್ರೀಯ ಗುಣಮಟ್ಟದ ಲೈನರ್​ಗಳನ್ನು ಅಳವಡಿಸುವುದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಕೃಷಿ ಹೊಂಡಗಳ ಪರಿಶೀಲನೆಯಲ್ಲಿ ಅಂದಿನ ಸಚಿವ ಕೃಷ್ಣ ಬೈರೇಗೌಡ

ಬಿಜೆಪಿಯಿಂದ ಸೇಡಿನ ರಾಜಕಾರಣ: ಕಾಂಗ್ರೆಸ್
ಇನ್ನು ಬಿಎಸ್ ವೈ ಸರ್ಕಾರದ ನಡೆಯನ್ನು ಟೀಕಿಸಿರುವ ಕಾಂಗ್ರೆಸ್, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಪ್ರತಿಪಕ್ಷ ನಾಯಕರ ಮೇಲೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿ ತನಿಖೆಗೆ ಆದೇಶ ನೀಡುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ ಆರೋಪಿಸಿದೆ. ಅಲ್ಲದೆ ಒಂದು ಕಡೆ ಸಿಎಂ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಾರೆ, ಮತ್ತೊಂದು ಕಡೆ ಪ್ರತಿಪಕ್ಷ ನಾಯಕ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ತನಿಖೆಗೆ ಆದೇಶ ನೀಡುತ್ತಾರೆ. ಕೃಷಿ ಭಾಗ್ಯ ಯೋಜನೆ ತನಿಖೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

SCROLL FOR NEXT