ರಾಜ್ಯ

ಮೈಸೂರು: ದಲಿತ ಕೇರಿಯಲ್ಲಿ ಪೇಜಾವರ ಶ್ರೀಗಳಿಂದ ಸಾಮರಸ್ಯದ ಪಾದಯಾತ್ರೆ

Raghavendra Adiga

ಮೈಸೂರು: ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ  ಬುಧವಾರ ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯಕ್ಕಾಗಿ ಪಾದಯಾತ್ರೆ ಕಾರ್ಯಕ್ರಮ ನಡೆಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ಶೋಷಣೆ ತಗ್ಗಿಸುವ ಉದ್ದೇಶದೊಡನೆ ಈ ಕಾರ್ಯಕ್ರಮ ನಡೆಸಿದ್ದಾಗಿ ಶ್ರೀಗಳು ಹೇಳಿದ್ದಾರೆ.

ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ಕೊಟ್ಟ ಶ್ರೀಗಳನ್ನು ಆ ದಲಿತ ಕುಟುಂಬ ಆದರಿಸಿ ಸತ್ಕರಿಸಿದ್ದಲ್ಲದೆ ಶ್ರೀಗಳ ಆಶೀರ್ವಾದ ಪಡೆದಿದೆ. ಚೌಡಪ್ಪ-ರಾಜಮ್ಮ ಎಂಬ ದಂಪತಿಗಳ ಮನೆಗೆ ಶ್ರೀಗಳು ಭೇಟಿ ಕೊಟ್ಟಿದ್ದರು

ಪೂರ್ಣಕುಂಭ ಹೊತ್ತಿದ್ದ ಮಹಿಳೆಯರು, ಯುವತಿಯರು ಶ್ರೀಗಳ ಸಾಮರಸ್ಯದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.ಅವರು ಮಾರ್ಗದುದ್ದಕ್ಕೆ ಪುಷ್ಪಾರ್ಚನೆ ಮಾಡುತ್ತಾ ಶ್ರೀಗಳೊಡನೆ ನಡಿಗೆಯಲ್ಲಿ ಭಾಗವಹಿಸಿದ್ದರು.

ಮಾರ್ಗದ ನಡುವೆ ತುಂತುರು ಮಳೆ ಕೂಡ ಬಂದಿದ್ದು ಮಳೆ ಬಿರುಸಾಗುತ್ತಿದ್ದಂತೆ ಶ್ರೀಗಳು ಚೌಡಪ್ನವರ ಮನೆಗೆ ಪ್ರವೇಶಿಸಿದ್ದಾರೆ. ಅಲ್ಲಿ ಅವರಿಗೆ ತುಳಸಿ ಮಾಲೆ ಅರ್ಪಿಸಲಾಗಿತ್ತಲ್ಲದೆ ಪಾದಪೂಜೆ ನೆರವೇರಿಸಲಾಗಿದೆ.

ಇನ್ನು ಈ ದಿನ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸಿ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಕೇಳಲಾಗಿ "ನಾನು ಈ ಬಗ್ಗೆ ಪ್ರತಿಕ್ರಯಿಸಲ್ಲ, ಅವರಿಗೆ ಡಿಕೆಶಿ ನಿರಪರಾಧಿ ಎಂದು ತೋರಿರಬಹುದು, ಕಾರಣ ಪ್ರತಿಭಟನೆಯಲ್ಲಿ ಭಾಗವಹಿಸಿರಬಹುದು, ನಾನು ತಟಸ್ಥನಾಗಿದ್ದೇನೆ, ಇದಕ್ಕೆ ನಾನೇನೂ ಹೇಳಲಾರೆ" ಎಂದಿದ್ದಾರೆ.

SCROLL FOR NEXT