ರಾಜ್ಯ

ಡಿಕೆಶಿ ಪರ ಒಕ್ಕಲಿಗರ ಶಕ್ತಿ ಪ್ರದರ್ಶನ: ಪ್ರತಿಭಟನೆಗೆ ಗೈರಾಗಿದ್ದ ಹೆಚ್'ಡಿಕೆ

Manjula VN

ಬೆಂಗಳೂರು: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಬುಧವಾರ ಬೀದಿಗಿಳಿದಿದ್ದ ಒಕ್ಕಲಿಗ ಸಮುದಾಯ ಪ್ರತಿಭಟನಾ ರ್ಯಾಲಿಗಳ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. 

ಪ್ರತಿಭಟನಾ ರ್ಯಾಲಿ ಮೂಲಕ ಒಕ್ಕಲಿಗ ಸಮುದಾಯ ಒಕ್ಕಲಿಗರ ರಾಜಕೀಯ ಶಕ್ತಿ ದಮನ ಮಾಡುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಸರ್ಕಾರಕ್ಕೆ ರವಾನಿಸಿದೆ. 

ಡಿಕೆ.ಶಿವಕುಮಾರ್ ಬಂಧನ ಖಂಡಿಸಿ ರಾಜ್ಯ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ಕರೆ ನೀಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಒಕ್ಕಲಿಗ ಸಮುದಾಯದ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿತ್ತು. 

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವತಂತ್ರ್ಯ ಉದ್ಯಾನವನದವರೆಗೂ ನಡೆದ ಪ್ರತಿಭಟನಾ ಸಭೆ, ಮೆರವಣಿಗೆಯಲ್ಲಿ ಕನಕಪುರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ತುಮಕೂರು ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಹರಿದು ಬಂದ ಒಕ್ಕಲಿಗರು ಸಮುದಾಯದ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರು. ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಲಾಯಿತು. 

ಹೆಚ್'ಡಿಕೆ ಗೈರು
ಕೆಲ ದಿನಗಳ ಹಿಂದಷ್ಟೇ ಡಿಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಕುಟುಂಬಕ್ಕೆ ಬೆಂಬಲ ನೀಡಿದ್ದರು. ಅದಲ್ಲದೆ, ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಆದರೆ, ನಿನ್ನೆ ಡಿಕೆ.ಶಿವಕುಮಾರ್ ಬಂಧನ ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಮಾತ್ರ ಕುಮಾರಸ್ವಾಮಿಯವರು ಗೈರಾಗಿದ್ದಿದ್ದು, ಪ್ರತಿಭಟನೆಯಲ್ಲಿ ಎದ್ದು ಕಾಣುತ್ತಿತ್ತು. 

ರ್ಯಾಲಿಗೆ ಗೈರಾದ ಹಿನ್ನೆಲೆಯಲ್ಲಿ ಚೆನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ರ್ಯಾಲಿ ಬಗ್ಗೆ ಆಯೋಜಕರು ನನಗೆ ಮಾಹಿತಿ ನೀಡಿರಲಿಲ್ಲ ಂದು ಹೇಳಿದ್ದಾರೆ. 

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರ್ಯಾಲಿ ಆಯೋಜಕರು, ರ್ಯಾಲಿ ಬಗ್ಗೆ ಚಿಂತನೆಗಳು ನಡೆದಾಗ ಮೊದಲು ಜೆಪಿ.ನಗರದಲ್ಲಿರುವ ಕುಮಾರಸ್ವಾಮಿಯವರ ನಿವಾಸಕ್ಕೆ ಭೇಟಿ ನೀಡಲಾಗಿತ್ತು. ಆದರೆ, ಈ ವೇಳೆ ಪದ್ಮನಾಭನಗರದಲ್ಲಿರುವ ದೇವೇಗೌಡ ಮನೆಯಲ್ಲಿದ್ದಾರೆಂದು ತಿಳಿಸಿದರು. ಬಳಿಕ ಪದ್ಮನಾಭನಗರಕ್ಕೆ ತೆರಳಿದಾಗ ಕುಮಾರಸ್ವಾಮಿಯವರು ಸಿಕ್ಕಿರಲಿಲ್ಲ ಎಂದಿದ್ದಾರೆ. 

ಟೆಲಿಫೋನ್ ಕದ್ದಾಲಿಕೆ ಹಾಗೂ ಐಎಂಎ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುವುದರಿಂದ ಕುಮಾರಸ್ವಾಮಿಯವರು ರ್ಯಾಲಿಗೆ ಗೈರಾಗಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT