ರಾಜ್ಯ

ಕನ್ನಡದಲ್ಲಿಲ್ಲ ಐಬಿಪಿಎಸ್ ಪರೀಕ್ಷೆ: ಕೇಂದ್ರದ ವಿರುದ್ಧ ಎಚ್ ಡಿಕೆ ಕಿಡಿ

Nagaraja AB

ಬೆಂಗಳೂರು:  ಕನ್ನಡಿಗರ ಹಲವು ಬೇಡಿಕೆಗಳ ಹೂರತಾಗಿಯೂ ರಾಷ್ಟ್ರೀಕೃತ ಬ್ಯಾಂಕ್ ಗಳ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ-ಐಬಿಪಿಎಸ್  ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೇಂದ್ರಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪರೀಕ್ಷೆ ಬರೆಯಲು ಈ ಮೊದಲು ಇದ್ದ ಸ್ಥಳೀಯ ( Domicile ) ನಿಯಮವನ್ನು ವಾಪಸ್ ತರಲಾಗಿಲ್ಲ. ಇದೀಗ ಮಾತೃ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅನುಮತಿ ಕೊಡದೆ ಇರುವುದು ಕೇಂದ್ರ ಸರ್ಕಾರದ ಮಲತಾಯಿ ಧೋರಣಿಗೆ ಸಾಕ್ಷಿ. ಕೇಂದ್ರದ ಈ ನೀತಿಯನ್ನು ವಿರೋಧಿಸುವುದಾಗಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಗಳ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ ( ಐಬಿಪಿಎಸ್ ) ಗುರುವಾರ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ ಮಾತ್ರ ಈ ಪರೀಕ್ಷೆಗಳನ್ನು ಬರೆಯಬಹುದೆಂದು ಸೂಚಿಸಿದೆ.

ಐಬಿಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿವಿಧ ಕನ್ನಡ ಸಂಘಟನೆಗಳು ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿವೆ.

 ಕೆಲವು ದಿನಗಳ ಹಿಂದೆ ರಾಜ್ಯದ ಸಂಸದರ ನಿಯೋಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಬೇಡಿಕೆ ಇಟ್ಟಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು.ಆದರೀಗ ಕೇಂದ್ರ ಸರ್ಕಾರ ಹಳೆಯ ಚಾಳಿಯನ್ನು ಮತ್ತೆ ಮುಂದುವರೆಸಿದೆ ಎಂಬ ಟೀಕೆ ವ್ಯಕ್ತವಾಗಿದೆ.

SCROLL FOR NEXT