ರಾಜ್ಯ

ಮಂಗಳೂರು: ಕೃಷ್ಣಮೃಗ ಚರ್ಮ ಮಾರಾಟ ಜಾಲ ಪತ್ತೆ, ನಾಲ್ವರ ಬಂಧನ

Raghavendra Adiga

ಮಂಗಳೂರು: ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಕೃಷ್ಣಮೃಗ ಚರ್ಮ ಮಾರಾಟ ಜಾಲವನ್ನು ಸೋಮವಾರ ಪತ್ತೆ ಹಚ್ಚಿ, ನಾಲ್ವರನ್ನು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ನಿವಾಸಿಗಳಾದ ರವಿ ಹನುಮಂತಪ್ಪ (32), ಮಲ್ಲಪ್ಪ (32), ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ನಿವಾಸಿಗಳಾದ ಪರಶುರಾಮ ಲಮಾಣಿ (32), ಟಿಪ್ಪು ಸುಲ್ತಾನ್ (33) ಬಂಧಿತ ಆರೋಪಿಗಳು.

ಸೋಮವಾರ ಬೆಳಗ್ಗೆ 8:30ಕ್ಕೆ ಅರಣ್ಯ ಸಂಚಾರ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಲಾಯಿತು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ನಾಲ್ವರು ಅನುಮಾನಾಸ್ಪದವಾಗಿ ನಿಂತುಕೊಂಡಿದ್ದರು. ಪೊಲೀಸರು ಜೀಪಿನಿಂದ ಇಳಿಯುತ್ತಿರುವುದನ್ನು ನೋಡಿದ ಆರೋಪಿಗಳು ಓಡಿ ಹೋಗಲು ಯತ್ನಿಸಿದರು. ಆಗ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಿಚಾರಿಸಿದಾಗ ಕೃಷ್ಣಮೃಗ ಚರ್ಮ ಹಾಗೂ ಕೊಂಬನ್ನು ಮಾರಾಟಕ್ಕೆ ತಂದಿರುವುದು ಪತ್ತೆಯಾಗಿದೆ. ಅವರಿಂದ ಎರಡು ಕೃಷ್ಣಮೃಗ ಚರ್ಮ ಹಾಗೂ ಒಂದು ಜೊತೆ ಕೊಂಬನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಸಧ್ಯ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಮಂಗಳೂರು ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

SCROLL FOR NEXT