ರಾಜ್ಯ

ಸ್ವಾತಂತ್ರ್ಯಹೋರಾಟಗಾರ ಕಾಮ್ರೇಡ್ ಕೆ.ಎಂ. ಶ್ರೀನಿವಾಸ್ ನಿಧನ

Srinivasamurthy VN

ಶಿವಮೊಗ್ಗ: ರೈತ ಮತ್ತು ಕಾರ್ಮಿಕ ನಾಯಕ ಶಿವಮೊಗ್ಗದ ಕಾಮ್ರೇಡ್ ಕೆ ಎಂ ಶ್ರೀನಿವಾಸ್ ವಯೋಸಹಜ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.

ಅವರಿಗೆ 89 ವರ್ಷ ವಯಸ್ಸಾಗಿತ್ತು . ಶಾಂತವೇರಿ ಗೋಪಾಲಗೌಡರ ಜೊತೆ ಸ್ವಾತಂತ್ರ್ಯ ಹೋರಾಟ ಮತ್ತು ಕಾಗೋಡು ರೈತ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದ ಅವರು ನಂತರ ಭಾರತೀಯ ಕಮ್ಮುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ಜೊತೆ ಗುರುತಿಸಿಕೊಂಡು ಶಿವಮೊಗ್ಗದಲ್ಲಿ ಕಮ್ಯುನಿಸ್ಟ್ ಚಳವಳಿ ಬೆಳೆಯಲು ಕಾರಣರಾದರು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಪಡೆಯಲು ನಿರಾಕರಿಸಿ ತಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಘನತೆ ತಂದುಕೊಂಡರು.

ಚಕ್ರ ವರಾಹಿ ವಿದ್ಯುತ್ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರನ್ನು ಸಂಘಟಿಸಿ ಮುಳುಗಡೆ ರೈತ ಹೋರಾಟ ಸಮಿತಿ ರಚಿಸಿ ಜೈಲುವಾಸವನ್ನೂ ಸಹ ಅನುಭವಿಸಿದ್ದ ಅವರು, ಕಮ್ಮುನಿಸ್ಟ್ ಪಕ್ಷದ ಪ್ರಾಂತೀಯ ರೈತ ಸಂಘದ ಕಾರ್ಯದರ್ಶಿಯಾಗಿ , ಭದ್ರಾವತಿ ಕಬ್ಬಿಣ ಕಾರ್ಖಾನೆ ಮತ್ತು ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿ ರೈತ , ಕಾರ್ಮಿಕರಿಬ್ಬರ ಪರವಾಗಿಯೂ ಹಲವಾರು ವರ್ಷಗಳ ಕಾಲ ಹೋರಾಟ ನಡೆಸಿದ್ದರು.

ಅವರು ಒಬ್ಬ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

SCROLL FOR NEXT