ರಾಜ್ಯ

ಬಿಡಿಎ, ಬಿಬಿಎಂಪಿಯಲ್ಲಿನ 3 ಹಗರಣಗಳ ತನಿಖೆಗೆ ಸಿಎಂ ಸೂಚನೆ

Manjula VN

ಬೆಂಗಳೂರು: ನಿಯಮಬಾಹಿರವಾಗಿ ಬಿಡಿಎ ಸಾವಿರಾರು ಬದಲಿ ನಿವೇಶನ ಹಂಚಿಕೆ, ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತು ಅವರ ಕುಟುಂಬದವರ ಹೆಸರಲ್ಲಿ 245 ಬದಲಿ ನಿವೇಶನಗಳ ಹಂಚಿಕೆ ಹಾಗೂ ಬಿಬಿಎಂಪಿ ರಸ್ತೆ ಅಗಲೀಕರಣದಲ್ಲಿ ನಡೆಸಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಸೂಚನೆ ನೀಡಿದ್ದಾರೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ನಡೆದಿರುವ ಮೂರು ಹಗರಣಗಳ ಕುರಿತು ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್.ಆರ್.ರಮೇಶ್ ನೀಡಿರುವ ದೂರಿನ ಮೇರೆಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ. 

2 ತಿಂಗಳುಗಳಲ್ಲಿ ಹಗರಣದ ಸತ್ಯಾಸತ್ಯತೆ ಕುರಿತು ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಹೆಚ್.ಶಶಿಧರ್ ವರದಿಗೆ ವಿರುದ್ಧವಾಗಿ ಮತ್ತು ಬಿಡಿಎ ನಿಯಮಗಳನ್ನು ಅನುಸರಿಸದೆ ಮಾಜಿ ಪಾಲಿಕೆ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತವರ ಕುಟುಂಬದ ಸದಸ್ಯರಿಗೆ ರೂ.600 ಕೋಟಿ ಮೌಲ್ಯದ 245 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. 

ಅಲ್ಲದೇ, 2014-15ರಿಂದ 2017-18ರ ಅವಧಿಯಲ್ಲಿ ಬಿಡಿಎ ನಿಯಮಬಾಹಿರವಾಗಿ ಸಾವಿರಾರು ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಹಾಗೂ ಸಾರ್ವಜನಿಕ ಉದ್ದೇಶದ ಬಳಕೆಗಾಗಿ ಮೀಸಲಿಟ್ಟಿರುವ ನೂರಾರು ಸಿಎ ನಿವೇಶನಗಳನ್ನು ಕತ್ತರಿಸಿ ಹಂಚಿಕೆ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಎರಡು ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ. 
         
ಬಿಬಿಎಂಪಿ ವ್ಯಾಪ್ತಿಯ ಜೆಡಿ ಮರ ಜಂಕ್ಷನ್ ನಿಂದ ಕೋಳಿಫಾರಂ ಜಂಕ್ಷನ್ ವರೆಗಿನ 7.4ಕಿಮೀ ಉದ್ದದ ಬನ್ನೇರುಘಟ್ಟ ರಸ್ತೆ ಮತ್ತು ಇಬ್ಬಲೂರು ಜಂಕ್ಷನ್ ನಿಂದ ಚಿಕ್ಕಕನ್ನಹಳ್ಳಿ ಜಂಕ್ಷನ್ ವರೆಗೆ 4.74ಕಿ.ಮೀ ಉದ್ದದ ಸರ್ಜಾಪುರ ರಸ್ತೆಯ ಅಗಲೀಕರಣ ಕಾರ್ಯಗಳಲ್ಲಿ ಅನುಮೋದಿತ ಡಿಪಿಆರ್ ಪಾಲಿಸದೆ ಮತ್ತು ಸರ್ವಿಸ್ ರಸ್ತೆಗಳನ್ನು ನಿರ್ಮಿಸದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವ ಕುರಿತು ಮಾಧ್ಯಮಘಳಲ್ಲಿ ವರದಿಗಳು ಬಂದ ಹಿನ್ನಲೆಯಲ್ಲಿ 2 ತಿಂಗಳುಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸಿಎಂ ನಿರ್ದೇಶಿಸಿದ್ದಾರೆ. 

SCROLL FOR NEXT