ರಾಜ್ಯ

2020ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಹೂಡಿಕೆ ಸಮಾವೇಶ: ಸಿಟಿ ರವಿ

Srinivasamurthy VN

ನೂತನ ಪ್ರವಾಸೋದ್ಯಮ ನೀತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ಎಂದ ಪ್ರವಾಸೋಧ್ಯಮ ಸಚಿವರು

ಬೆಂಗಳೂರು: 2020ರ ವೇಳೆಗೆ ಕರ್ನಾಟಕದಲ್ಲಿ ಪ್ರವಾಸೋಧ್ಯಮ ಹೂಡಿಕೆ ಸಮಾವೇಶ ನಡೆಸುವುದಾಗಿ ಪ್ರವಾಸೋಧ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಪ್ರವಾಸೋದ್ಯಮ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಟಿ ರವಿ ಅವರು, ಪ್ರವಾಸೋಧ್ಯಮದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ 2020ಕ್ಕೆ ಕರ್ನಾಟಕದಲ್ಲಿ ಪ್ರವಾಸೋಧ್ಯಮ ಹೂಡಿಕೆ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಉದ್ದೇಶದಿಂದಲೇ ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಅಂತೆಯೇ ಪ್ರವಾಸೋಧ್ಯಮದ ಅಭಿವೃದ್ಧಿ ಮತ್ತು ಅಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿಶಿಷ್ಟ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಿ ಯುವಕರಿಗೆ ಅನುಕೂಲವಾಗಲಿದೆ. ಅಲ್ಲದೆ ರಾಜ್ಯದಲ್ಲಿರುವ ವಿಶ್ವ ದರ್ಜೆಯ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ರಾಜ್ಯವನ್ನು ಜಗತ್ತಿನ ಆಕರ್ಷಕ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಉದ್ದೇಶದಿಂದ ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ (PPP-public private partnership) ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರ್ಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಇದೇ ಕಾರಣಕ್ಕಾಗಿಯೇ 2020ರ ಆಗಸ್ಟ್ ತಿಂಗಳಲ್ಲಿನಲ್ಲಿ ಪ್ರವಾಸೋಧ್ಯಮ ಹೂಡಿಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದೂ ಸಿಟಿ ರವಿ ಹೇಳಿದರು.

SCROLL FOR NEXT