ರಾಜ್ಯ

ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: 26 ಹಳ್ಳಿಗಳ 25 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಪ್ರಯೋಜನ!

Nagaraja AB

ಚಿತ್ರದುರ್ಗ: ಮೂಲಸೌಕರ್ಯ ವಂಚಿತ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರಣವೇ ಬೇರೆಯಾಗಿದೆ. ಹಳ್ಳಿಗಳು ಮಾತ್ರವಲ್ಲ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಿಂದಲೂ ಇಲ್ಲಿಗೆ ಅಪಾರ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ.

ಶುಚಿತ್ವ, ಮೃದು ವರ್ತನೆ, ಆಸನ ವ್ಯವಸ್ಥೆ ಮತ್ತು ವೈದ್ಯರು ,ನರ್ಸಿಂಗ್ ಸಿಬ್ಬಂದಿ ಲಭ್ಯತೆಯ ಕಾರಣಗಳಿಂದಾಗಿ ಜಿಲ್ಲೆಯ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತ ಇದು ಭಿನ್ನವಾಗಿದೆ.ಮೊದಲು ಬಂದ ರೋಗಿಯನ್ನು ಯಾವ ರೀತಿ ಉಪಚರಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಕಡೆ ಗಳಿಗೆಯಲ್ಲೂ ಬಂದ ರೋಗಿಗಳನ್ನು ಉಪಚರಿಸಲಾಗುತ್ತದೆ. ಈ ಆಸ್ಪತ್ರೆಯಿಂದಾಗಿ 26 ಹಳ್ಳಿಗಳು  25 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ. 

ಡಾಕ್ಟರ್ ಅಕ್ಷತಾ ಸೇವೆ ವಹಿಸಿಕೊಂಡ ನಂತರ ಆಸ್ಪತ್ರೆಗೆ ಹೊಸ ಕಳೆ ಬಂದಿದೆ. ಇಲ್ಲಿಗೆ ಬರುವ ರೋಗಿಗಳಿಗೆ  ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿದಿನ 180 ರಿಂದ 200 ರೋಗಿಗಳು ಆಸ್ಪತ್ರೆಗೆ ಬರುವುದಲ್ಲದೆ ತೃಪ್ತಿಯಿಂದ ಮರಳುತ್ತಾರೆ. ಇದರ ಜೊತೆಗೆ ಪ್ರತಿ ಗುರುವಾರ  ವ್ಯಾಕ್ಸಿನೇಷನ್ ಡ್ರೈವ್ ಹಾಗೂ ಪ್ರತಿ ತಿಂಗಳ 9 ರಂದು ಪ್ರಧಾನ ಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನವನ್ನು ಏರ್ಪಡಿಸಲಾಗುತ್ತದೆ. ಪ್ರತಿ ತಿಂಗಳು 10 ರಿಂದ 12 ಶಿಶುಗಳ ಡೆಲಿವರಿ ಮಾಡಲಾಗುತ್ತದೆ. 

ಪಂಡರಹಳ್ಳಿ ಆರೋಗ್ಯ ಕೇಂದ್ರ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ಇರುವುದರಿಂದ ಗರ್ಭೀಣಿ ಮಹಿಳೆಯರು ಮೊದಲಿಗೆ ಇಲ್ಲಿಗೆ  ಬರುತ್ತಾರೆ. ಸಮಸ್ಯೆ ಸಂಕೀರ್ಣವಾಗಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಭೇಟಿ ನೀಡುತ್ತಾರೆ.  ಆಸ್ಪತ್ರೆ ಆವರಣವನ್ನು ಶುಚಿಯಾಗಿ ಇಡಲಾಗಿದೆ. ಇದಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ. ರೋಗಿಗಳೊಂದಿಗೆ ಚರ್ಚೆ ಜೊತೆಗೆ ಚಿಕಿತ್ಸೆ ನೀಡುವ ಕಾರ್ಯಕ್ರಮದೊಂದಿಗೆ ಅತ್ಯುತ್ತಮ ಸೇವೆಗಾಗಿ ನೀಡುವ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆಯಲು ಯೋಜನೆ ಹಾಕಿಕೊಳ್ಳಲಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಡಾ. ಅಕ್ಷತಾ, ಎಲ್ಲಾ ರೋಗಿಗಳು ಉತ್ತಮವಾಗಿ ಉಪಚರಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಸಾಮಾನ್ಯ ಡೆಲಿವರಿಗಳನ್ನು ಇಲ್ಲಿ ಮಾಡಲಾಗುತ್ತದೆ. ಸ್ವಲ್ಪ ಸಮಸ್ಯೆಯಾದರೆ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗುವುದು, ಗ್ರಾಮೀಣ ಪ್ರದೇಶಗಳಲ್ಲೂ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದರು. 

ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿಗಳಿಂದ ಆವರಣವನ್ನು ಶುಚಿಯಾಗಿಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಭದ್ರ ಮೇಲ್ದಂಡೆ ಯೋಜನೆ ಈ ಭಾಗಕ್ಕೆ ತಲುಪಿದರೆ ಆ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ಡಾ. ಅಕ್ಷತಾ ವಿವರಿಸಿದರು. 

SCROLL FOR NEXT