ರಾಜ್ಯ

ಬಳ್ಳಾರಿ ಜಿಲ್ಲೆಯ ವಿಭಜನೆ ವಿಚಾರದಲ್ಲಿ ಜನರ ಭಾವನೆ ಬೇರೆಯೇ ಇದೆ: ಸಚಿವ ಶ್ರೀರಾಮುಲು

Manjula VN

ಉಡುಪಿ: ಬಳ್ಳಾರಿ ಜಿಲ್ಲೆಯ ವಿಭಜನೆ ವಿಚಾರದಲ್ಲಿ ಜನರ ಭಾವನೆ ಬೇರೆ ರೀತಿಯಲ್ಲಿದೆ. ಆದರೆ ಸರ್ಕಾರದ ತೀರ್ಮಾನಕ್ಕೆ ಕೆಲವೊಮ್ಮೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ವಿಭಜನೆ ಸಂಬಂಧ ಮುಖ್ಯಮಂತ್ರಿ ಅವರ ಜೊತೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಆ ಭಾಗದ ಎಲ್ಲಾ ಹೋರಾಟಗಾರರ ಜೊತೆಯೂ ಚರ್ಚಿಸಲಾಗಿದೆ. ತಾವು ಮತ್ತು ಮುಖ್ಯಮಂತ್ರಿ ಮತ್ತೊಮ್ಮೆ ಸಮಾಲೋಚನೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದರು.

ಹಿಂದುಳಿದ ಜಿಲ್ಲೆಗೆ ಅಭಿವೃದ್ಧಿ ಅಗಬೇಕು ಎನ್ನುವುದು ತಮ್ಮ ಅಭಿಪ್ರಾಯವಾಗಿದೆ. ಬಳ್ಳಾರಿ ದೊಡ್ಡ ಜಿಲ್ಲೆಯಾದ ಕಾರಣ ಬೇರೆ ಬೇರೆ ತೊಂದರೆ ಬರಬಾರದು. ಎಲ್ಲರ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ಇದರಲ್ಲಿ ಯಾವುದೇ ವೈಯಕ್ತಿಕ ತೀರ್ಮಾನ ಇಲ್ಲ. ಸೋಮಶೇಖರ್ ರೆಡ್ಡಿ ನನ್ನ ಸಹೋದರ. ಅವರು ನನ್ನ ಜೊತೆಗಿರುವ ಶಾಸಕ. ಅವರ ಜೊತೆ ಕುಳಿತು ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ಅವರು ಹೇಳಿದರು.

SCROLL FOR NEXT