ರಾಜ್ಯ

ಕೂಲಿ ಕಾರ್ಮಿಕರನ್ನು ಊರಿಗೆ ಕಳುಹಿಸಿದರೆ ಗುತ್ತಿಗೆದಾರರ ವಿರುದ್ಧ ಕ್ರಮ

Sumana Upadhyaya

ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದು ಲಕ್ಷಕ್ಕೂ ಮೇಲ್ಪಟ್ಟು ಕೂಲಿ ಕಾರ್ಮಿಕರಿದ್ದಾರೆ. ಗ್ರಾನೈಟ್, ಟೈಲ್ಸ್, ಕಾಂಕ್ರೀಟ್ ಹಾಕುವ ಕಾರ್ಮಿಕರು ಪ್ರತಿನಿತ್ಯ ಹೆದ್ದಾರಿಗಳಲ್ಲಿ ಬೆಂಗಳೂರಿನಿಂದ ಗುಳೆ ಹೋಗುತ್ತಿದ್ದಾರೆ. ಹೀಗಾಗಿ ಕಠಿಣ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಎಲ್ಲಾ ಗುತ್ತಿಗೆದಾರರ ಜೊತೆ ಸಭೆ ನಡೆಸಿ ನಿರ್ಧಾರಕ್ಕೆ ಬಂದ ಅವರು, ಕಾರ್ಮಿಕರು ಶೆಡ್‌ಗಳನ್ನು ಬಿಟ್ಟು ಹೊರ ಹೋಗದಂತೆ, ಸಂಪೂರ್ಣ ಖರ್ಚುವೆಚ್ಚ ಗುತ್ತಿಗೆದಾರರೇ ನೋಡಿಕೊಳ್ಳಬೇಕು. ಈಗಾಗಲೇ ಡೆವಲಪರ್ಸ್ ಗಳ ಜೊತೆಗೂ ಮಾತನಾಡಿದ್ದೇವೆ. ಅವರೇ ಅವರ ಕಾರ್ಮಿಕರನ್ನು ನೋಡಿಕೊಳ್ಳಬೇಕು. ಹೊರಗೆ ಕಳುಹಿಸಿದರೆ ಸರ್ಕಾರ, ಪಾಲಿಕೆ ನಿಗಾವಹಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಟ್ಟಡಕ್ಕೆ ನೀಡಿರುವ ಪರವಾನಗಿ ರದ್ದು ಮಾಡಲಾಗುವುದು ಎಂದರು.

ಕಾರ್ಮಿಕರು ಟೆಂಪೋಗಳ ಮೂಲಕ ಗುಂಪುಗುಂಪಾಗಿ ಹೋಗುವುದನ್ನು ತಡೆಯಬೇಕಾಗಿದೆ. ಇದಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಕಾರ್ಮಿಕರ ವಾಹನಗಳನ್ನೂ ನಿನ್ನೆಯೇ ಜಪ್ತಿ ಮಾಡಲಾಗಿದೆ. ಇದಕ್ಕಾಗಿ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ಬೆಂಗಳೂರು ಜಿಲ್ಲಾಧಿಕಾರಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸದ್ಯ 34 ಕೋಟಿ ರೂಪಾಯಿ ಹಣ ಇದೆ. ಅದರಲ್ಲಿ ಹತ್ತಿರವಿರುವ ಕಲ್ಯಾಣಮಂಟಪಗಳಲ್ಲಿ, ತುಮಕೂರು ವಸ್ತುಪ್ರದರ್ಶನ ಮೈದಾನದಲ್ಲಿ ವಸತಿ, ಊಟ, ವೈದ್ಯಕೀಯ ಸೌಲಭ್ಯ ಕೊಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಊರಿಗೆ ತೆರಳಲು ಅವಕಾಶ ಕೊಡಬಾರದು. ಶೆಡ್ ಬಿಟ್ಟು ತೆರಳಲು ಮಾಲೀಕರು ಒತ್ತಾಯ ಮಾಡಿದರೆ ಕೂಡಲೇ ದೂರು ಕೊಡಿ. ಅಂತಹ ಮಾಲೀಕರನ್ನು ಬಂಧಿಸಲಾಗುವುದು. ಅಲ್ಲದೆ ಯಾರೂ ಬಾಡಿಗೆ ಮನೆಯಿಂದ ಹೋಗಲು ಒತ್ತಾಯ ಮಾಡಬಾರದು ಎಂದು ತಿಳಿಸಿದರು.

ನಗರದಲ್ಲಿ ಹಲವಾರು ಸ್ವಯಂ ಸೇವಾ ಸಂಘ ಸಂಸ್ಥೆಗಳು ಊಟದ ಪೊಟ್ಟಣಗಳನ್ನು ಹಂಚುತ್ತಿದ್ದಾರೆ. ಆ ರೀತಿ ಮಾಡದೆ ಹತ್ತಿರದ ಪೊಲೀಸ್ ಠಾಣೆ ಅಥವಾ ಕಂದಾಯ ಅಧಿಕಾರಿ ಕಚೇರಿಗೆ ತೆರಳಿ ಆ ಮೂಲಕ ವಿತರಣೆ ಮಾಡಲು ಕ್ರಮ ವಹಿಸಲಾಗುವುದು. ದೇಣಿಗೆಯನ್ನು ಯಾವುದೇ ಖಾಸಗಿ ಖಾತೆಗಳಿಗೆ ಹಾಕಬೇಡಿ. ಮುಖ್ಯಮಂತ್ರಿಗಳ ಹಾಗೂ ಪ್ರಧಾನಮಂತ್ರಿಗಳ ನಿಧಿಗೆ ಮಾತ್ರ ಹಾಕಿ ಎಂದರು.

ನಗರದಲ್ಲಿ ಪಕ್ಷಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಲಾಲ್‌ಬಾಗ್, ಕಬ್ಬನ್ ಉದ್ಯಾನ ಸೇರಿದಂತೆ ಇನ್ನಿತರ ಉದ್ಯಾನ/ ಪ್ರದೇಶಗಳಲ್ಲಿ ಪಕ್ಷಿಗಳಿಗೆ ದವಸ ಧಾನ್ಯಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಕೊರೋನಾ ವೈರೆಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನನ್ನ ಒಂದು ವರ್ಷದ ಮಂತ್ರಿ ವೇತನವನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡುತ್ತಿದ್ದೇನೆ. ಪಾಲಿಕೆ ಎಲ್ಲಾ ಸದಸ್ಯರ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

SCROLL FOR NEXT