ರಾಜ್ಯ

ಕರ್ನಾಟಕ ಲಾಕ್ ಡೌನ್: ಇದ್ದಿಲು ತಯಾರಿಸುವ ಅಲೆಮಾರಿ ಜನಾಂಗದ ನೆರವಿಗೆ ಧಾವಿಸಿದ ಚಾಮರಾಜನಗರ ಜಿಲ್ಲಾಡಳಿತ

Srinivasamurthy VN

ಚಾಮರಾಜನಗರ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಸುಮಾರು 144 ಮಂದಿ ಅಲೆಮಾರಿ ಜನಾಂಗ ತಮ್ಮ ತುತ್ತಿನ ಚೀಲದ ಹೊಟ್ಟೆ ತುಂಬಿಸಿಕೊಳ್ಳಲು ಚಾಮರಾಜನಗರದ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ತಾಲ್ಲೂಕು ಹಾಗೂ ಸಂತೇಮರಹಳ್ಳಿ ಹೋಬಳಿಯ ಜಾಲಿಮುಳ್ಳುಗಳು ಅತೀ ಹೆಚ್ಚು ಹಬ್ಬಿರುವ ಕೆರೆಕಟ್ಟೆ ಪ್ರದೇಶಗಳಲ್ಲಿ ಕಬಿನಿ ಚಾನಲ್‌ನ ಬದಿಗಳಲ್ಲಿ ಬೀಡು ಬಿಟ್ಟಿದ್ದಾರೆ ಈ ಅಲೆಮಾರಿ ಕುಟುಂಬವು ಜಾಲಿಮುಳ್ಳುಗಳನ್ನು ಬುಡಸಮೇತ ಕಿತ್ತುಹಾಕಿ ಅದನ್ನು ಒಟ್ಟಾಗಿ ಸೇರಿಸಿ, ಬೆಂಕಿಯಲ್ಲಿ ಬೇಯಿಸಿ, ಇದ್ದಿಲು ತಯಾರಿಸಿ, ಅದನ್ನು ಟೂತ್‌ಪೇಸ್‌ಟ್ ತಯಾರಿಸುವ  ಕಾರ್ಖಾನೆಗಳಿಗೆ ಹಾಗೂ ಹೋಟೆಲ್‌ಗಳಿಗೆ ರಫ್ತು ಮಾಡುತ್ತಾರೆ. 

ಆದರೆ ಕೊರೊನಾ ವೈರಸ್ ರಾಜ್ಯದೆಲ್ಲೆಡೆ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಅಲೆಮಾರಿ ಜನಾಂಗದ ಸ್ಥಿತಿ ಚಿಂತಾಜನಕವಾಗಿದೆ. ಅತ್ತ ತಮ್ಮ ತವರು ರಾಜ್ಯವಾದ ಮಹಾರಾಷ್ಟ್ರಕ್ಕೂ ತೆರಳಲು ಸಾಧ್ಯವಾಗದೇ ತಾವು ಇರುವಲ್ಲಿಯೇ ಬೀಡು  ಬಿಟ್ಟಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಚಾಮರಾಜನಗರ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದ ಮೇರೆಗೆ ಇವರ ನೆರವಿಗೆ ಧಾವಿಸಿದ್ದು, ಅವರು ಬೀಡು ಬಿಟ್ಟಿರುವ ಸ್ಥಳಗಳಿಗೆ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ, ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಸಿತ್ತಲ್ಲದೇ, ಅವರಿಗೆ  ಕೊರೊನಾ ಸೊಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಇತ್ತ ಕಮದಾಯ ಇಲಾಖೆಯೂ ಕೂಡ ಅವರ ನೆರವಿಗೆ ಧಾವಿಸಿದ್ದು, ಅವರ ಪ್ರತಿದಿನದ ಮೂರೊತ್ತಿನ ಊಟಕ್ಕೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಸಾಂಬಾರು ಪದಾರ್ಥಗಳನ್ನು ಉಚಿತವಾಗಿ  ವಿತರಿಸುತ್ತಿದೆ. 

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಮಾತನಾಡಿ ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಯಳಂದೂರು ತಾಲ್ಲೂಕಿನ, ಗೌಡಹಳ್ಳಿ, ಅಂಬಳೆ, ಹೊನ್ನೂರು, ಉಪ್ಪಿನಮೋಳೆ, ಮಲ್ಲಿಗೆಹಳ್ಳಿ, ಸಂತೇಮರಹಳ್ಳಿ, ಗೂಳಿಪುರ  ಭಾಗದಲ್ಲಿ ಬೀಡು ಬಿಟ್ಟಿರುವ ಜಾಲಿಮುಳ್ಳುಗನ್ನು ತರಿದು ಇದ್ದಿಲು ತಯಾರಿಸುವ 144 ಮಂದಿ ಅಲೆಮಾರಿ ಜನರ ಸ್ಥಿತಿ ಈಗ ಚಿಂತಾಜನಕವಾಗಿದ್ದು, ಅವರ ನೆರವಿಗೆ ಚಾಮರಾಜನಗರ ಜಿಲ್ಲಾಡಳಿತವು ಧಾವಿಸಿದ್ದು, ಅವರಿಗೆ ಊಟೋಪಚಾರ ಒದಗಿಸಲಾಗುತ್ತಿದೆ ಎಂದರು. ಯಳಂದೂರು  ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ರಾಜು ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ಅಲೆಮಾರಿ ಜನಾಂಗದ ಊಟೋಪಚಾರಕ್ಕಾಗಿ ಅಕ್ಕಿ, ಬೇಳೆ, ಎಣ್ಣೆ, ಸಾಂಬಾರ ಪದಾರ್ಥಗಳನ್ನು ಊಚಿತವಾಗಿ ಲಾಕ್‌ಡೌನ್ ಮುಗಿಯುವವರೆಗೂ ವಿತರಿಸಲಾಗುತ್ತದೆ  ಎಂದರು.

ಯಳಂದೂರು ತಾಲ್ಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಮಾತನಾಡಿ ಕೊರೊನಾ ಭೀತಿ ಹಿನ್ನಲೆಯಲ್ಲಿ ತಾಲ್ಲೂಕಿನಾದ್ಯಂತ ನೆಲೆಯೂರಿರುವ ಅಲೆಮಾರಿ ಜನಾಂಗದ ವೈದ್ಯಕೀಯ ತಪಾಸಣೆ ನಡೆಸಿದ್ದೇವೆ. ಅಲೆಮಾರಿ ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆಗಳನ್ನು ಸರ್ಕಾರದಿಂದ  ಕೂಡಲೇ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಹಾರಾಷ್ಟ್ರದ ರಾಯಗಡದ ಅಲೆಮಾರಿ ವಿಜೇಶ್ ರಾಥೋಡ್ ಮಾತನಾಡಿ ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಜಾರಿಯಾಗಿದ್ದರಿಂದ ನಮ್ಮ ಇದ್ದಿಲು ತಯಾರಿಸುವ ಕೆಲಸ ಸ್ಥಗಿತಗೊಂಡಿದೆ. ಈಗ ನಮ್ಮ  ಊಟೋಪಚಾರದ ನೆರವಿಗೆ ಚಾಮರಾಜನಗರ ಜಿಲ್ಲಾಡಳಿತ ಧಾವಿಸಿದ್ದು, ನಮಗೆ ಉಚಿತವಾಗಿ ಅಕ್ಕಿ, ಬೇಳೆ, ಎಣ್ಣೆ, ಸಾಂಬಾರಪದಾರ್ಥಗಳನ್ನು ನೀಡುವುದರ ಜೊತೆಗೆ, ವೈದ್ಯಕೀಯ ತಪಾಸಣೆ ನಡೆಸಿದ್ದಾರೆ ಎಂದರು.

ವರದಿ; ಗೂಳಿಪುರ ನಂದೀಶ.ಎಂ.

SCROLL FOR NEXT