ರಾಜ್ಯ

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ.

ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವಿಚಾರ ವ್ಯಾಪಕ ಸುದ್ದಿಗೆವಾಗುತ್ತಿದ್ದಂತೆಯೇ ಎಚ್ಚೆತ್ತಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಪುಲಿಕೇಶಿ ನಗರ ಪೊಲೀಸ್  ಠಾಣೆಯ ಎಸಿಪಿ ತಬರಕ್ ಫಾತಿಮಾ ಅವರನ್ನು ಪ್ರಕರಣದ ತನಿಖೆಗೆ ನಿಯೋಜಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಎಸಿಪಿ ಫಾತಿಮಾ ಅವರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿತ್ತು. ಬೆಂಗಳೂರಿನ ಥಣಿಸಂದ್ರ ಮುಖ್ಯ ರಸ್ತೆ ಸಾರಾಯಿಪಾಳ್ಯದ ಸಾದಿಕ್ ಕಾಲೊನಿಯಲ್ಲಿ  ವ್ಯಕ್ತಿಯೊಬ್ಬನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆಗೆ ತೆರಳಿದ್ದರು. ಈ ವೇಳೆ ಕೆಲವರು ಆಶಾ ಕಾರ್ಯಕರ್ತೆಯರ ಜೊತೆ ವಾಗ್ವಾದ ನಡೆಸಿದ್ದಾರೆ. ಹಲ್ಲೆ ಕೂಡ ಮಾಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ದೂರಿದ್ದಾರೆ. ವಾಗ್ವಾದ  ನಡೆದ ಸಂದರ್ಭದಲ್ಲಿ ಕೆಲವರು ಮೈಕ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಕೊಡಬಾರದು, ಪೋನ್ ನಂಬರ್ ಕೊಡಬಾರದು ಎಂದು ಬೆದರಿಕೆ ಹಾಕಿ, ಕಾಗದಗಳನ್ನು ಹರಿದು ಹಾಕಿದ್ದಾರೆ ಎಂದು ಕೃಷ್ಣವೇಣಿ ಎನ್ನುವ ಆಶಾ ಕಾರ್ಯಕರ್ತೆಯರು ದೂರಿದ್ದಾರೆ.

ಇನ್ನು ಹಲ್ಲೆಗೊಳಗಾಗಿದ್ದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಅವರ ಮನೆಗೆ ಡಿಸಿಎಂ ಅಶ್ವತ್ ನಾರಾಯಣ ಅವರು ಭೇಟಿ ನೀಡಿ ವಿಚಾರಿಸಿದ್ದರು. ಇದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್ ವೈ, ಕೆಲ ಕಡೆ ಸಣ್ಣಪುಟ್ಟ ಘಟನೆಗಳು ಆಗಿವೆ. ಅವರಿಗೆ ಮನವರಿಕೆ  ಮಾಡಿಕೊಡಬೇಕಾಗುತ್ತೆ. ಜತೆಗೆ ದೆಹಲಿಗೆ ಹೋಗಿ ಬಂದವರು ಕೂಡ ಸಹಕರಿಸಬೇಕು. ಸ್ವಯಂಪ್ರೇರಿತರಾಗಿ ಹೊರಬಂದು ಪರೀಕ್ಷೆಗೆ ಸಹಕಾರ ಕೊಡಿ. ಸಾದಿಕ್ ಕಾಲೊನಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿರುವುದು ಸರಿ ಅಲ್ಲ ಎಂದು ಹೇಳಿದ್ದರು.

SCROLL FOR NEXT