ರಾಜ್ಯ

ನೀರು, ಆಹಾರವಿಲ್ಲದೇ ಸತತ 12 ಗಂಟೆಗಳು ಪಿಪಿಇ ಧರಿಸಿ ವೈದ್ಯರು ನಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ ನೋಡಿ...!

Srinivas Rao BV

ಬೆಂಗಳೂರು: "ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ, personal protective equipment) ನ್ನು ಧರಿಸಿ ನಾವು ಸತತ 12 ಗಂಟೆಗಳ ಕಾಲ ನೀರು, ಆಹಾರ ಸೇವಿಸುವುದಕ್ಕೆ ಸಾಧ್ಯವಾಗುವುದಿಲ್ಲ" ಇದು ಸತತ 7 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವ ವೈದ್ಯರ ಪೈಕಿ ಒಬ್ಬರಾದ ಡಾ. ರಂಜಿತಾ (ಹೆಸರು ಬದಲಾವಣೆ ಮಾಡಲಾಗಿದೆ) ಅವರ ಮಾತುಗಳು.

ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿರುವ ಡಾ.ರಂಜಿತಾ ಅವರು ಮುಂದಿನ ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿರಲಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯರ ಒಂದು ತಂಡ ಈಗಾಗಲೇ ಕ್ವಾರಂಟೈನ್ ನಲ್ಲಿದ್ದು, ಮತ್ತೊಂದು ತಂಡ ಚಿಕಿತ್ಸೆ ನೀಡಲು ಕೊವಿಡ್-19 ವಾರ್ಡ್ ನಲ್ಲಿದೆ.

ವಾರ್ಡ್ ನಿಂದ ಹೊರಗೆ ಬಂದಿರುವ ವೈದ್ಯರ ತಂಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ನಾವು ಈಗ ಕ್ವಾರಂಟೈನ್ ನಲ್ಲಿದ್ದೇವೆ. ಹೆಚ್ಚಿನ ಕಾಳಜಿ ಮತ್ತು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಪಿಪಿಇ ಧರಿಸಿರುವಾಗ ನಾವು ಸತತ 12 ಗಂಟೆಗಳ ಕಾಲ ನೀರು ಆಹಾರ ಸೇವಿಸುವಂತಿಲ್ಲ. ಸೋಂಕು ಹರಡುವ ಅಪಾಯ ಹೆಚ್ಚಾಗಿರುವುದರಿಂದ ಕೊರೋನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗ ಪಾಲಿಸಬೇಕಾದ ಅತ್ಯಂತ ಕಠಿಣವಾದ ಕಾರ್ಯವಿಧಾನ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಕೋರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ, ಆದರೆ ಒತ್ತಡ ಹೆಚ್ಚಾಗುತ್ತದೆ. ಹೆಚ್ಚಿನ ಸಿಬ್ಬಂದಿಗಳಿದ್ದರೆ ನಾವು ಪ್ರತಿ ಆರು ಗಂಟೆಗಳಿಗೊಮ್ಮೆ ಒಂದೊಂದು ಪಾಳಿಯಲ್ಲಿ ಕಾರ್ಯನಿರ್ವಹಿಸಬಹುದು. 12 ಗಂಟೆಗಳ ಸತತ ಕೆಲಸ ತುಂಬಾ ಒತ್ತಡ ಉಂಟುಮಾಡುತ್ತದೆ ಒಂದು ವಾರದ ವೇಳೆಗೆ ಸಂಪೂರ್ಣವಾಗಿ ಸುಸ್ತಾಗಿರುತ್ತೇವೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ. 

ಒಂದೆಡೆ ನಿರಂತರ ಕೆಲಸದಿಂದ ದೈಹಿಕ ಬಳಲಿಕೆ, ಮತ್ತೊಂದೆಡೆ ತಮಗೆ ಸೋಂಕು ಹರಡುವ ಭಯದಿಂದ ಮಾನಸಿಕ ಒತ್ತಡ, ಬಳಲಿಕೆ ಇರುತ್ತದೆ. ನನಗೆ ಸೋಂಕು ತಗುಲಿದರೆ ನನ್ನ ಕುಟುಂಬಕ್ಕೂ ಅದು ಅಪಾಯ, ಆದರೂ ನನ್ನ ದೇಶ, ನನ್ನ ಜನಕ್ಕಾಗಿ ಇದನ್ನು ಮಾಡಲೇಬೇಕಾಗಿದೆ ಎನ್ನುತ್ತಾರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಯುವ ವೈದ್ಯರು.

ಪಿಪಿಇಗಳನ್ನು ನಿರಂತರವಾಗಿ 12 ಗಂಟೆಗಳ ಕಾಲ ಧರಿಸುವುದು ಮತ್ತೊಂದು ಸವಾಲಿನ ಸಂಗತಿ, ರಕ್ಷಣಾ ಉಪಕರಣಗಳು ಚೆನ್ನಾಗಿಲ್ಲ. ಪ್ರಯೋಗಾಲಯದಲ್ಲಿ ಬೆವರು ಹರಿಯುತ್ತಿದ್ದರೂ ಬಾತ್‍ರೂಮ್ ಗೆ ಹೋಗುವುದಕ್ಕೆ ಆಗುವುದಿಲ್ಲ ಅಥವಾ ದಣಿವಾರಿಸಿಕೊಳ್ಳುವುದಕ್ಕೆ ನೀರು ಕುಡಿಯುವುದಕ್ಕೂ ಆಗುವುದಿಲ್ಲ ಎನ್ನುತ್ತಾರೆ ವೈದ್ಯರು.

SCROLL FOR NEXT