ರಾಜ್ಯ

ಕೊರೋನಾ ನಿಯಂತ್ರಣ ಕುರಿತು ದಿನವಿಡೀ ಸಭೆ ನಡೆಸಿದ ಸಿಎಂ ಯಡಿಯೂರಪ್ಪ

Lingaraj Badiger

ಬೆಂಗಳೂರು: ಸರ್ಕಾರ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಆರೋಗ್ಯ ಕಿಟ್ ‌ಗಳನ್ನು ಒದಗಿಸುತ್ತಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಸಂಬಂಧ ಶುಕ್ರವಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಹೆಲ್ತ್ ಕಿಟ್ ವಿತರಿಸಬೇಕು. ಹೆಲ್ತ್ ಕಿಟ್ ವಿತರಿಸುವಾಗ ರಾಜಕೀಯ ತಲೆದೋರದಂತೆ ನಿಗಾವಹಿಸಬೇಕು. ಪಕ್ಷಪಾತಿಗಳಾಗಿ ಅಧಿಕಾರಿಗಳು ವರ್ತಿಸಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಲಾಕ್‌‌‌ಡೌನ್ ವಿಷಯದಲ್ಲಿ ನೀಡಿರುವ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯಡಿಯೂರಪ್ಪ, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಶಪಥ ಮಾಡಿದ್ದಾರೆ. ಇಂದು ಮುಸ್ಲಿಂ ಮುಖಂಡರ ಸಭೆ ನಂತರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ಸೇರಿದಂತೆ ದಿನವಿಡೀ ಸರಣಿ ಸಭೆ ನಡೆಸಿದರು.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಮರ್ಪಕವಾಗಿ ಹೊಂದಾಣಿಕೆಯಿಂದ ಜವಾಬ್ದಾರಿ ನಿಭಾಯಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಧಿಕಾರಿಗಳ ಸಭೆ ನಂತರ ಸಚಿವರುಗಳ ಜತೆ ಸಮಾಲೋಚನೆ ನಡೆಸಿದರು.

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾನವಾಗಿ ಎಲ್ಲರಿಗೂ ಸಹಕರಿಸಬೇಕು. ಸಭೆಗಳನ್ನು ನಡೆಸುವುದು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಿ. ಆಹಾರ ಹಂಚಿಕೆ ವಿಚಾರದಲ್ಲಿ ಗುಣಮಟ್ಟ ಕಾಪಾಡಬೇಕು ಎಂದರು‌.

ಇಂದಿರಾಕ್ಯಾಂಟಿನ್ ಆಹಾರ ವಿತರಣೆಯಲ್ಲಿ ಗೋಲ್ ಮಾಲ್ ದೂರಿನ ವಿಚಾರವಾಗಿ ಬಿಬಿಎಂಪಿ ಆಯುಕ್ತ ಗೌತಮ್ ಕುಮಾರ್ ಅವನ್ನು ತರಾಟೆಗೆ ತೆಗೆದುಕೊಂಡ ಸಿಎಂ,ಇಂದಿರಾ ಕ್ಯಾಂಟಿನ್ ಆಹಾರದಲ್ಲಿ ಗುಣಮಟ್ಟ ಹಾಗೂ ಪ್ರಮಾಣ ಸರಿಯಾಗಿರಬೇಕು. ಮತ್ತೆ ದೂರುಗಳು ಬಂದರೆ ಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು‌.

ವೈದ್ಯರ ಸಲಹೆ ಪಡೆದು ಪಿಪಿಕೆ ಕಿಟ್ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಯಾ ಜಿಲ್ಲಿಯಲ್ಲಿಯೇ ಇರಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಸಮನ್ವಯತೆ ಇರುವಂತೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಹೊಂದಾಣಿಕೆಯಿಂದ ಜವಾಬ್ದಾರಿ ನಿಭಾಯಿಸಲು ಸಲಹೆ ನೀಡಿದರು.

ಇನ್ನು ಮಧ್ಯಾಹ್ನದ ನಂತರ ಬೆಂಗಳೂರು ನಗರದ ಸಚಿವರು ಹಾಗೂ ಉನ್ನತಾಧಿಕಾರಿಗಳ ಸಭೆ ನಡೆಸಿದರು. ಇನ್ನು ನಾಳೆ ಬೆಳಗ್ಗೆ ಬಿಬಿಎಂಪಿ ಸದಸ್ಯರು ಹಾಗೂ ಶಾಸಕರ ಸಭೆ ನಡೆಸಲು ನಿರ್ಧರಿಸಲಾಗಿದೆ.

SCROLL FOR NEXT