ರಾಜ್ಯ

ಲಾಕ್ ಡೌನ್ ಎಫೆಕ್ಟ್: ಮೈಸೂರು ಹೊರವಲಯಗಳಲ್ಲಿ ದುಬಾರಿ ಬೆಲೆಗೆ ಅಕ್ರಮ ಮದ್ಯ ಮಾರಾಟ, ನೀರಾಗೆ ಹೆಚ್ಚಿದೆ ಬೇಡಿಕೆ

Sumana Upadhyaya

ಮೈಸೂರು: ಕೊರೋನಾ ಲಾಕ್ ಡೌನ್ ನಿಂದ ರೈತರು, ದಿನಗೂಲಿ ನೌಕರರ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೆ ಮದ್ಯಪ್ರಿಯರಿಗೆ ಅದರಿಂದ ದೂರವಿರಲು ಸಾಧ್ಯವಾಗುತ್ತಿಲ್ಲ, ಇದರಿಂದ ಇಂದು ಮದ್ಯವು ಕೂಡ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಸುದ್ದಿಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಮೈಸೂರು ಹೊರವಲಯ ಮತ್ತು ಇಲ್ಲಿನ ಸುತ್ತಮುತ್ತ ಗ್ರಾಮಗಳಲ್ಲಿ ಗರಿಷ್ಠ ಚಿಲ್ಲರೆ ದರದಿಂದ ಎರಡು ಮೂರು ಪಟ್ಟು ಹೆಚ್ಚು ದರಕ್ಕೆ ಮದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಮದ್ಯದ ಚಟ ಹೊಂದಿರುವವರು ಎಲ್ಲಿಂದಲೋ ಹಣ ತಂದು ಎಷ್ಟು ದುಬಾರಿಯಾದರೂ ಖರೀದಿಸುತ್ತಾರೆ. ಹೀಗಾಗಿ ಮದ್ಯ ಮಾರಾಟ ಮಾಡಿ ಹಣ ಮಾಡುವವರಿಗೆ ಇದು ಸುಗ್ಗಿಯ ಕಾಲ.

ನಗರ ಪ್ರದೇಶಗಳಲ್ಲಿ ಮದ್ಯ ಸಿಗದಿರುವಾಗ ಪೊಲೀಸರ ಭಯದಿಂದ ಹೊರವಲಯ, ಹಳ್ಳಿಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಮದ್ಯಗಳು 90 ಮಿಲಿ ಲೀಟರ್ 180 ಮಿಲಿ ಲೀಟರ್ ಬಾಟಲ್ ಗಳಲ್ಲಿ ಸಿಗುತ್ತದೆ.

ಕ್ವಾರ್ಟರ್ ಗೆ 90 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದ ಮದ್ಯದ ಬೆಲೆ ಈಗ 200 ರೂಪಾಯಿಗೆ ಏರಿಕೆಯಾಗಿದೆ. ಬೀರ್ ಗಳಿಗೆ ಹೆಚ್ಚಿದ ಬೇಡಿಕೆಯಿದ್ದರೂ ಏಜೆಂಟರಿಗೆ ಇದನ್ನು ಸಾಗಿಸಲು ಕಷ್ಟವಿರುವುದರಿಂದ ಬೀರ್ ಗಳು ಮದ್ಯಪ್ರಿಯರಿಗೆ ಸಿಗುವುದು ದುಸ್ತರವಾಗಿದೆ.

ಗ್ರಾಮಗಳಲ್ಲಿ, ಊರುಗಳಲ್ಲಿ ಮನೆಗಳಲ್ಲಿ ಕದ್ದುಮುಚ್ಚಿ ಮದ್ಯಗಳನ್ನು ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಖರೀದಿದಾರರೊಬ್ಬರು ಹೇಳುತ್ತಾರೆ.

ನೀರಾಕ್ಕೆ ಬೇಡಿಕೆ: ಲಿಕ್ಕರ್ ಗೆ ಪೂರಕವಾಗಿ ತೆಂಗಿನ ಮರದಿಂದ ತಯಾರಿಸುವ ನೀರಾಕ್ಕೆ ಕೂಡ ಲಾಕ್ ಡೌನ್ ನಂತರ ಬೇಡಿಕೆ ಹೆಚ್ಚಾಗಿದೆಯಂತೆ. ಹಿಂದೆ ಲೀಟರ್ ಗೆ 40 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದ ನೀರಾ ಇಂದು ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಳ್ಳಿಗಳಲ್ಲಿ ಲೀಟರ್ ಗೆ 80ರಿಂದ 100 ರೂಪಾಯಿಗೆ ಮಾರಾಟವಾಗುತ್ತಿದೆ.

ಮದ್ಯ ಸಿಗದಿರುವುದರಿಂದ ನೀರಾಕ್ಕೆ ಬೇಡಿಕೆ ಹೆಚ್ಚಾಗಿದ್ದು ಬೆಳ್ಳಂಬೆಳಗ್ಗೆ 4.30ರಿಂದ 5.30ರೊಳಗೆ ಹೋದರೆ ಸಿಗುತ್ತದೆ. ಅದು ಕೂಡ ಮೊದಲು ಬಂದವರಿಗೆ ಆದ್ಯತೆ.  

SCROLL FOR NEXT