ರಾಜ್ಯ

ಕರ್ನಾಟಕ-ಕೇರಳ ಗಡಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಪೇದೆಗೆ ಗಾಯ

Srinivasamurthy VN

ದಕ್ಷಿಣ ಕನ್ನಡ: ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಸಂಪರ್ಕಿಸುವ ಗಡಿ ರಸ್ತೆಯನ್ನು ಮುಚ್ಚಿರುವಂತೆಯೇ ಅತ್ತ ಕೇರಳ ಮೂಲದ ಅಪರಿಚತ ಯುವಕರು ಗಡಿಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೊಲೀಸ್ ಸಿಬ್ಬಂದಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದು, ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೂಲಗಳ ಪ್ರಕಾರ ಕೇರಳ ಕಡೆಯಿಂದ ವಾಹನದಲ್ಲಿ ಬಂದ ಯುವಕರ ತಂಡ ಕರ್ನಾಟಕ ಪ್ರವೇಶ ಮಾಡಲು ಪ್ರಯತ್ನ  ನಡೆಸಿತು, ಆಗ ಪೊಲೀಸರು ತಡೆದರು. ಆಗ ಆಕ್ರೋಶಗೊಂಡ ಯುಕವರ ತಂಡ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಿದೆ. ಕಲ್ಲು ತೂರಾಟದಲ್ಲಿ ಓರ್ವ ಪೇದೆ ಗಾಯಗೊಂಡಿದ್ದಾರೆ.

ಇನ್ನು ದೇಶಾದ್ಯಂತ ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಕರ್ನಾಟಕ ಕೇರಳದ ಜೊತೆಗಿನ ಗಡಿಯನ್ನು ಬಂದ್ ಮಾಡಿದೆ. ಹೀಗಾಗಿ ಇಲ್ಲಿ ಯಾವುದೇ ರೀತಿಯ ವಾಹನ ಸಂಚಾರವಿಲ್ಲ. ಆದರೆ ಕೇರಳ ಸರ್ಕಾರ ಮಾತ್ರ ಕರ್ನಾಟಕ-ಕೇರಳ ಗಡಿಯಲ್ಲಿ ವಾಹನ ಸಂಚರಕ್ಕೆ  ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚನೆಗಳನ್ನು ನೀಡಿದೆ.

ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರನ್ನು ಕರೆತರುವ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಕೊರೊನಾ ಸೋಂಕು ಹರಡದಂತೆ  ತಡೆಯಲು ದೇಶದ ಪ್ರಮುಖ ರಾಜ್ಯಗಳು ಅಂತರರಾಜ್ಯ ಗಡಿ ಬಂದ್ ಮಾಡಿವೆ. ಕರ್ನಾಟಕವೂ ಸಹ ಕೇರಳಕ್ಕೆ ಸಂಪರ್ಕಿಸುವ ಗಡಿಯನ್ನು ಬಂದ್ ಮಾಡಿದೆ. ಆದರೆ, ಈ ವಿಚಾರ ರಾಜಕೀಯ ಸ್ವರೂಪವನ್ನು ಪಡೆದಿದ್ದು, ಕರ್ನಾಟಕ-ಕೇರಳ ಗಡಿ ಮಾರ್ಗವನ್ನು ತೆರೆಯುವಂತೆ ಕರ್ನಾಟಕಕ್ಕೆ  ಸೂಚಿಸಬೇಕು ಎಂದು ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

SCROLL FOR NEXT