ರಾಜ್ಯ

ರೈತ ಸಂಪರ್ಕ‌ ಕೇಂದ್ರ ತೆರೆಯದ ಮೂವರು ಅಧಿಕಾರಿಗಳ‌ ಅಮಾನತು

Nagaraja AB

ಬೆಂಗಳೂರು:  ರೈತ ಸಂಪರ್ಕ‌ ಕೇಂದ್ರಗಳನ್ನು‌ ತೆರೆಯದೆ ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ಮೂವರ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಸೂಚನೆ ಮೇರೆಗೆ ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಲಾಕ್‌ಡೌನ್ ನಿಂದ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮಾರ್ಚ್ 30 ಹಾಗೂ ಏಪ್ರಿಲ್  2 ರಂದು  ರೈತ ಸಂಪರ್ಕ ಕೇಂದ್ರಗಳು, ಕೃಷಿ ಪರಿಕರ ಮಾರಾಟ ಮಳಿಗೆಗಳು ಮತ್ತು ಕೃಷಿ ಯಂತ್ರಧಾರೆಗಳನ್ನು ತೆರೆದು ರೈತರಿಗೆ ಅಗತ್ಯ ಸೇವೆಯನ್ನು ಒದಗಿಸಲು ಸುತ್ತೋಲೆ‌ ಮೂಲಕ ಸೂಚಿಸಲಾಗಿರುತ್ತದೆ.  

ಸಚಿವರ ಸೂಚನೆ ಹಾಗೂ ಇಲಾಖೆಯ ಸುತ್ತೋಲೆ ಸೂಚನೆಯಿದ್ದಾಗ್ಯೂ ಸಹ ದೇವನಹಳ್ಳಿ ಕಸಬಾ ರೈತ ಸಂಪರ್ಕ ತೆರೆಯದಿರುವ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ದೂರು ಬಂದಿರುತ್ತದೆ.

ಈ ದೂರನ್ನಾಧರಿಸಿ ಸಚಿವರು ಕೃಷಿ ನಿರ್ದೇಶಕರಿಗೆ ಈ ರೈತ ಸಂಪರ್ಕ ಕೇಂದ್ರಕ್ಕೆ ಅನಿರೀಕ್ಷಿತ ಭೇಡಿ ನೀಡಿ ಪರಿಶೀಲಿಸುವಂತೆ ಸೂಚಿಸಿರುತ್ತಾರೆ. ಅದರಂತೆ ದೇವನಹಳ್ಳಿ ಕಸಬಾ ರೈತ ಸಂಪರ್ಕ‌ಕೇಂದ್ರಕ್ಕೆ ಕೃಷಿ ನಿರ್ದೇಶಕರಾದ ಶ್ರೀನಿವಾಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎರಡು ದಿನಗಳಿಂದ ರೈತ ಸಂಪರ್ಕ ಕೇಂದ್ರ ತೆರೆಯದಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕೃಷಿ ನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದ್ದು, ರೈತ ಸಂಪರ್ಕ ಕೇಂದ್ರ ತೆರೆಯದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಆಯುಕ್ತರಿಗೆ ಸೂಚನೆ ನೀಡಿರುತ್ತಾರೆ.

ಅದರಂತೆ ಕರ್ತವ್ಯ ಲೋಪ ಎಸಗಿದ  ದೇವನಹಳ್ಳಿ ರೈತ ಸಂಪರ್ಕ‌ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ‌ ಮನಗೂಳಿ, ಕೃಷಿ ಅಧಿಕಾರಿ ಅರುಣ ಎನ್. ಹಾಗೂ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಬಿ.ಹೆಚ್  ಈ ಮೂವರು ಅಧಿಕಾರಿಗಳನ್ನು ಏಪ್ರಿಲ್ 3 ರಂದು ಅಮಾನತುಗೊಳಿಸಲಾಗಿದೆ.

SCROLL FOR NEXT