ರಾಜ್ಯ

ಮೈಸೂರಿನಲ್ಲಿ ಮತ್ತೆ ಏಳು ಕೊರೋನವೈರಸ್ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

Srinivasamurthy VN

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ 19 ವರ್ಷದ ಬಾಲಕ ಸೇರಿದಂತೆ ಇನ್ನೂ ಏಳು ಜನರಿಗೆ ಕೊರೋನವೈರಸ್‌ ಸೋಂಕು ದೃಢಪಟ್ಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತ ಒಟ್ಟು ಪ್ರಕರಣಗಳ ಸಂಖ್ಯೆ 28 ಕ್ಕೆ ಏರಿದೆ.

ಏಳು ಪ್ರಕರಣಗಳ ಪೈಕಿ ನಾಲ್ವರು ದೆಹಲಿಗೆ ಹೋಗಿ ಬಂದವರಾಗಿದ್ದು, ಇತರೆ ಇಬ್ಬರು ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದಾರೆ. ಇವರು ಜುಬಿಲಿಯೆಂಟ್‍ ಜೆನೆರಿಕ್ಸ್ ಔಷಧ ಕಾರ್ಖಾನೆಯ ಉದ್ಯೋಗಿಗಳಾಗಿದ್ದಾರೆ. ಅಧಿಕಾರಿಗಳು ಮತ್ತೊಬ್ಬ ವ್ಯಕ್ತಿಯ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ಮೊದಲ ಪ್ರಕರಣ ಮಾರ್ಚ್ 21 ರಂದು ದೃಢಪಟ್ಟಿತ್ತು. 30 ವರ್ಷದ ಈ ವ್ಯಕ್ತಿ ನಗರದ ನಿವಾಸಿಯಾಗಿದ್ದು, ದುಬೈನಿಂದ ಗೋವಾ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದ್ದರು. ಬಳಿಕ ಆತ ಮಾರ್ಚ್ 20 ರಂದು ಸ್ವತ: ಕೆಆರ್ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಪೇಷೆಂಟ್ ನಂಬರ್ 134,  135, 136, 137 & 138 - ಕ್ರಮವಾಗಿ 38, 19, 39, 39 ಮತ್ತು 54 ವರ್ಷದ ಮೈಸೂರಿನ ಪುರುಷರಾಗಿದ್ದಾರೆ. ಇವರೆಲ್ಲರಿಗೂ ದೆಹಲಿ ಪ್ರಯಾಣ ಬೆಳೆಸಿದ ಇತಿಹಾಸವಿದ್ದು ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಐವರು ಮೈಸೂರು ನಿವಾಸಿಗಳಲ್ಲ ಬದಲಿಗೆ  ದೆಹಲಿಯ ನಿವಾಸಿಗಳಾಗಿದ್ದಾರೆ. ಹಾಗೂ ನಿಜಾಮುದ್ದೀನ್‌ ತಬ್ಲೀಗ್‌ನಲ್ಲಿ ಇವರು ಯಾರೂ ಪಾಲ್ಗೊಂಡಿರಲಿಲ್ಲ ಎಂಬುದಾಗಿ ಮೈಸೂರು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪೇಷೆಂಟ್ ನಂಬರ್ 139 - 40 ವರ್ಷ ವಯಸ್ಸಿನ ಮೈಸೂರಿನ ಪುರುಷರಾಗಿದ್ದು, ಇವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯೂ ಇಲ್ಲ. ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತನಿಖೆ ಜಾರಿಯಲ್ಲಿದೆ. ನಗರದ ಕೆ.ಆರ್‌. ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಇನ್ನು  ಪೇಷೆಂಟ್ ನಂಬರ್ 140 - 34 ವರ್ಷದ ಪುರುಷರಾಗಿರುವ ಇವರು ನಂಜನಗೂಡಿನ ಜ್ಯುಬಿಲಿಯೆಂಟ್‌ ಔಷಧ ಕಾರ್ಖಾನೆಯ 109ನೇ ರೋಗಿಯ ಸಂಪರ್ಕಿತರಾಗಿದ್ದಾರೆ. ಇವರಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

SCROLL FOR NEXT