ರಾಜ್ಯ

ವಿದ್ಯುತ್ ಸರಬರಾಜು ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ:ಕೆಪಿಟಿಸಿಎಲ್

Sumana Upadhyaya

ಬೆಂಗಳೂರು: ಭಾರತೀಯರೆಲ್ಲರೂ ಭಾನುವಾರ ರಾತ್ರಿ 9.00 ಗಂಟೆಗೆ 9 ನಿಮಿಷಗಳ ಕಾಲ ತಮ್ಮ ಮನೆಗಳಲ್ಲಿಯ ವಿದ್ಯುತ್ ದೀಪಗಳನ್ನು ನಂದಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಈ ಕುರಿತು ಸಾಮಾನ್ಯ ಜನರಲ್ಲಿ ಮೇಲಿನ ಅವಧಿಯಲ್ಲಿ ವಿದ್ಯುತ್ ದೀಪಗಳನ್ನು ಮಾತ್ರ ನಂದಿಸಲು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಅಂದರೆ ರೆಫ್ರಿಜರೇಟರ್, ಹವಾನಿಯಂತ್ರಿತ ಸಾಧನಗಳು, ಫ್ಯಾನ್ ಗಳು ಇತ್ಯಾದಿಗಳನ್ನು ದಿನನಿತ್ಯದಂತೆ ಚಾಲ್ತಿಯಲ್ಲಿಡಲು ಕೋರಲಾಗಿದೆ.

ಇಂದು ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರದೊಂದಿಗೆ ವಿದ್ಯುತ್ ಚಾಲದ ಭದ್ರತೆ ಕುರಿತು ವೀಡಿಯೋ ಕಾನ್ಫರೆನ್ಸ್ ಮುಖಾಂತರ ವಿಶ್ಲೇಷಿಸಲಾಯಿತು. ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರ ರವರ ಸೂಚನೆ ಪ್ರಕಾರ ಎಲ್ಲಾ ಹಿರಿಯ ಅಧಿಕಾರಿಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು ವಿದ್ಯುತ್ ವಿತರಣಾ ಕಂಪನಿಗಳು, ರಾಜ್ಯ ವಿದ್ಯುತ್ ರವಾನೆ ಕೇಂದ್ರ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರಿಗೆ ಮೇಲಿನ ಅವಧಿಯಲ್ಲಿ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಕೋರಲಾಗಿದೆ.

ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮೇಲಿನ ಅವಧಿಯಲ್ಲಿ ವಿದ್ಯುತ್ ಸರಬರಾಜನ್ನು ಸರ್ಮಪಕವಾಗಿ ನಿರ್ವಹಿಸಲು ಸಲಹಾ ಟಿಪ್ಪಣಿಯನ್ನು ಹೊರಡಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಬೀದಿ ದೀಪಗಳನ್ನು ಚಾಲ್ತಿಯಲ್ಲಿ ಇಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಹಾಗೂ ತುರ್ತು ಸೇವೆಯಲ್ಲಿ ಇರುವ ಸಂಸ್ಥೆಗಳ ವಿದ್ಯುತ್ ದೀಪವನ್ನು ಮೇಲಿನ ಅವಧಿಯಲ್ಲಿ ಚಾಲ್ತಿಯಲ್ಲಿ ಇಡಲು ಕೋರಲಾಗಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಒಟ್ಟು 43 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಕೋವಿಡ್ -19 ರ ಪರಿಹಾರ ನಿಧಿಗೆ ನೀಡಿದೆ. ಚೆಕ್ಕನ್ನು ಮುಖ್ಯಮಂತ್ರಿಗಳಿಗೆ ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನಿನ್ನೆ ಹಸ್ತಾಂತರಿಸಿದರು.

SCROLL FOR NEXT