ರಾಜ್ಯ

ಲಾಕ್ ಡೌನ್ ಉಲ್ಲಂಘಿಸಿದರೇ ಕಾದಿದೆ ದೊಡ್ಡ ಗಂಡಾಂತರ: ಅಪಾಯದ ಎಚ್ಚರಿಕೆ ನೀಡಿದ ಸಿಎಂ

Shilpa D

ಬೆಂಗಳೂರು: ‘ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದೆ.ಲಾಕ್‌ಡೌನ್‌ ಅವಧಿಯ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಿ. ಎಚ್ಚರ ತಪ್ಪಿದರೆ ದೊಡ್ಡ ಗಂಡಾಂತರವನ್ನೇ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಜನತೆಗೆ ಕಳಕಳಿಯ ಮನವಿ ಮಾಡಿದ್ದಾರೆ. 

ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದ ಸ್ಥಿತಿ ತಲುಪಿದೆ. ಆದರೆ, ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲವಾದರೂ ಎಚ್ಚರ ತಪ್ಪಿದರೆ ದೊಡ್ಡ ಗಂಡಾಂತರವನ್ನೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ದೇಶ ವ್ಯಾಪಿ ಲಾಕ್‌ಡೌನ್‌ ಅವಧಿ ಏ.14ರಂದು ಮುಕ್ತಾಯಗೊಳ್ಳುತ್ತಿದ್ದು, ಅದನ್ನು ವಿಸ್ತರಿಸಬೇಕೋ, ಬೇಡವೋ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರ, ಬೀದರ್‌, ಮೈಸೂರು, ಮಂಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ವೈರಸ್‌ ನಿಯಂತ್ರಣಕ್ಕಾಗಿ ಗಡಿ ಪ್ರದೇಶಗಳನ್ನು ಮುಚ್ಚುವುದು, ಸಾರ್ವಜನಿಕವಾಗಿ ಹೆಚ್ಚು ಓಡಾಡುವಂತಹ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರದಂತೆ ನಿರ್ಬಂಧಿಸುವುದರ ಜತೆಗೆ ಕೊರೋನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಜನರು ಲಾಕ್‌ಡೌನ್‌ನ ಹಿಂದಿನ ಆಶಯವನ್ನು ಹಾಗೂ ಲಾಕ್‌ಡೌನ್‌ ಉಲ್ಲಂಘನೆಯಿಂದ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ಅರಿತು ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಆದೇಶ ಪಾಲಿಸಬೇಕಾಗಿದೆ ಎಂದು ಹೇಳಿದ್ದಾರೆ.
 

SCROLL FOR NEXT