ರಾಜ್ಯ

ಧಾರವಾಡ: ಕೊರೋನಾ ಸೋಂಕಿತ ಏಕೈಕ ವ್ಯಕ್ತಿ ಡಿಸ್ಚಾರ್ಜ್, ಈಗ ಜಿಲ್ಲೆಯಲ್ಲಿ ಕೊವಿಡ್-19 ಪ್ರಕರಣ ಶೂನ್ಯ

Lingaraj Badiger

ಧಾರವಾಡ: ಧಾರವಾಡ ಜಿಲ್ಲೆಯ ಕೊರೋನಾ ಸೋಂಕಿತ ಏಕೈಕ ವ್ಯಕ್ತಿ ಈಗ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಕೊವಿಡ್-19 ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.

ಕೊರೋನಾ ಸೋಂಕಿತ ಹೊಸ ಯಲ್ಲಾಪುರದ 33 ವರ್ಷದ ವ್ಯಕ್ತಿಗೆ ಸುಮಾರು 15 ದಿನಗಳ ನಂತರ ಕೊರೋನಾ ನೆಗಟಿವ್ ಬಂದಿದ್ದು, ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಧಾರವಾಡದಲ್ಲಿ ಯಾರೂ ಕೊರೋನಾ ಸೋಂಕಿತರ ಇಲ್ಲದಿರುವುದು ಸಂತಸದ ವಿಚಾರ ಎಂದು ಸಚಿವ ಜಗದೀಶ್ ಶೆಟ್ಟರ್‌ ಅವರು ಹೇಳಿದ್ದಾರೆ.

ಮಾರ್ಚ್ 12ರಂದು ಆಸ್ಟ್ರೇಲಿಯಾದಿಂದ ಗೋವಾ ಮೂಲಕ ಧಾರವಾಡಕ್ಕೆ ಆಗಮಿಸಿದ್ದ ಈ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು, ಬಳಿಕ ಮಾರ್ಚ್ 18ರಂದು ಎಸ್ ಡಿಎಂ ಆಸ್ಪತ್ರೆಗೆ, ಮಾರ್ಚ್ 22ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಧಾರವಾಡದಲ್ಲಿ ಆರಂಭದಲ್ಲೇ ಒಂದು ಕೇಸ್ ಪಾಸಿಟಿವ್ ಆಗಿತ್ತು. ಆದರೆ, ಈಗ ಅವರು ಗುಣಮುಖರಾಗಿರುವುದು ಸಂತಸ ತಂದಿದೆ. ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ. ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಇದರಿಂದ ಧಾರವಾಡದಲ್ಲಿ ಕೊರೋನಾ ಪ್ರಕರಣ ಜಿರೋ‌ಗೆ ಬಂದಿದೆ" ಎಂದಿದ್ಧಾರೆ.

SCROLL FOR NEXT