ರಾಜ್ಯ

ಕೊರೋನಾ ಹರಡುವಿಕೆ: ಮುಸ್ಲಿಮರ ವಿರುದ್ಧ ವಿನಾಕಾರಣ ಆರೋಪ ಮಾಡಿದರೆ ಕಠಿಣ ಕ್ರಮ: ಸಿಎಂ ಯಡಿಯೂರಪ್ಪ ಎಚ್ಚರಿಕೆ

Srinivas Rao BV

ಬೆಂಗಳೂರು: ಕೊರೋನಾ ಹರಡುತ್ತಿರುವ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ವೈರಸ್ ಹರಡುತ್ತಿರುವ ಆರೋಪವನ್ನು ವಿನಾಕಾರಣ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. 

ಕೊರೋನಾ ವೈರಸ್ ಸೋಂಕು ರಾಜ್ಯದಲ್ಲಿ ಹರಡಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಖಾಸಗಿ ಸುದ್ದಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಯಡಿಯೂರಪ್ಪ, ಕೊರೋನಾ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಶಾಸಕರು, ನಾಯಕರ ಜೊತೆಯಲ್ಲಿ ತಾವು ಒಂದು ಗಂಟೆಗೂ ಅಧಿಕ ಸಮಯ ಚರ್ಚೆ ನಡೆಸಿದ್ದು ತಮ್ಮ ಮನವಿಗೆ ಅವರು ಸ್ಪಂದಿಸಿರುವುದಾಗಿ ಹೇಳಿದ್ದಾರೆ. 

"ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಅಲ್ಪಸಂಖ್ಯಾತ ಮುಸ್ಲಿಂ ನಾಯಕರು, ಯಾವುದೇ ಕಾರಣಕ್ಕೂ  ಪ್ರಾರ್ಥನೆಗಳನ್ನು ಮಸೀದಿಯಲ್ಲಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ" ಎಂದು ಹೇಳಿದರು

ಈ ವೇಳೆ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ಸೋಂಕು ತಗುಲಿಸಿಕೊಂಡವರು ವೈದ್ಯರಿಗೆ ಸಹಕಾರ ನೀಡದೇ ’ಕೆಲವೆಡೆ’ ಹಲ್ಲೆ ನಡೆಸಿರುವ ಪ್ರಕರಣಗಳ ಬಗ್ಗೆಯೂ ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿರುವ ಸಿಎಂ, ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದು ಕೆಲವೆಡೆ ನಡೆದಿರುವ ಘಟನೆ ಇದನ್ನೆ ದೊಡ್ಡದು ಮಾಡಿ ಇಡಿ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡಿ ಹಗುರವಾಗಿ ಮಾತನಾಡುವುದು ಸರಿಯಲ್ಲ, ಅಂತಹವರು ಯಾವುದೇ ಪಕ್ಷದವರಾಗಿದ್ದರೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

SCROLL FOR NEXT