ರಾಜ್ಯ

ಗಂಗಾವತಿ: ಮೂಕ ಪ್ರಾಣಿಗಳಿಗೆ ಯುವಕರಿಂದ ಆಹಾರ, ಒಂದೇ ದಿನ 1300 ಕೆಜಿ ಕಲ್ಲಂಗಡಿ ಖರೀದಿ!

Lingaraj Badiger

ಗಂಗಾವತಿ: ಕೊರೋನಾದ ಲಾಕ್ಡೌನ್ ಪರಿಣಾಮದಿಂದ ಅನ್ನಾಹಾರವಿಲ್ಲದೇ ಪರದಾಡುತ್ತಿರುವ ಮೂಕ ಪ್ರಾಣಿಗಳ ನೆರವಿಗೆ ನಗರದ ಜೈನ್ ಸಮಾಜದ ಕೆಲ ಯುವಕರು ನಿಂತು ಮಾನವೀಯತೆ ಮರೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಕಳೆದ ಎರಡು ವಾರದಿಂದ ನಿತ್ಯವೂ ತಮ್ಮ ಸ್ವಂತ ವಾಹನಗಳಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಯುವಕರು, ಹಾದಿ ಬೀದಿಯಲ್ಲಿ ಆಹಾರವಿಲ್ಲದೇ ಅಲೆದಾಡುತ್ತಿರುವ ನಾಯಿ, ಕೋತಿ, ಜಾನುವಾರುಗಳಿಗೆ ಆಹಾರ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. 

ಸೋಮವಾರ ಕೇವಲ ಒಂದೇ ದಿನ 1300 ಕೆಜಿ ಪ್ರಮಾಣದಷ್ಟು ಕಲ್ಲಂಗಡಿ ಹಣ್ಣನ್ನು ಸಗಟು ವ್ಯಾಪಾರಿಗಳಲ್ಲಿ ಖರೀದಿಸಿ ಜಾನುವಾರುಗಳಿಗೆ ಹಾಕುವ ಮೂಲಕ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದಾರೆ.  

ನಿತ್ಯವೂ ಒಂದೊಂದು ತರಹದ ಆಹಾರವನ್ನು ಜಾನುವಾರುಗಳಿಗೆ ಹಾಕುತ್ತೇವೆ. ನಾನಾ ಬಗೆಯ ಹಣ್ಣು ಅಂದರೆ ಬಾಳೆ, ಕರಬೂಜು, ಕಲ್ಲಂಗಡಿ ಸೇರಿದಂತೆ ತರಕಾರಿಯನ್ನು ದಿನಕ್ಕೊಂದು ಐಟಂ ಜಾನುವಾರುಗಳಿಗೆ ಹಾಕುತ್ತೇವೆ. 

ಚಪಾತಿ, ರೋಟಿ, ಬಿಸ್ಕತ್, ಅನ್ನ, ಮೊದಲಾದ ಐಟಂಗಳನ್ನು ಕೋತಿ ಮತ್ತು ನಾಯಿಗಳಿಗೂ ಹಾಕುವ ಕಾರ್ಯ ಮಾಡುತ್ತಿದ್ದೇವೆ. ಅತಿ ಶೀಘ್ರ ಗ್ರಾಮೀಣ ಭಾಗಕ್ಕೆ ತೆರಳಿ ಅಲ್ಲಿಯೂ ನಾಯಿ, ಜಾನುವಾರು ಮತ್ತು ಕೋತಿಗಳಿಗೆ ಆಹಾರ ನೀಡುತ್ತೇವೆ. ಅಂಜನಾದ್ರಿ ಬೆಟ್ಟದಲ್ಲಿ ಸಾಕಷ್ಟು ಕೋತಿಗಳು ಹಸಿವಿನಿಂದ ಕಂಗಲಾಗಿವೆ ಎಂಬ ಮಾಹಿತಿ ಲಭಿಸಿದ್ದು, ಶೀಘ್ರ ಅಲ್ಲಿಗೂ ತೆರಳಿ ಅವುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ತಂಡದ ನೇತೃತ್ವ ವಹಿಸಿದ್ದ ನಗರದ ಸುರಭಿ ಏಜನ್ಸಿಯ ಮಾಲೀಕ ಕಮಲ್ ಹೇಳಿದ್ದಾರೆ.

SCROLL FOR NEXT