ರಾಜ್ಯ

ಕೋವಿಡ್‌-19 ಸಮಸ್ಯೆ ಮುಗಿದ ನಂತರ ಮತ್ತಷ್ಟು ಸಮಸ್ಯೆ: ದೇವೇಗೌಡ ಎಚ್ಚರಿಕೆ

Srinivas Rao BV

ಹಾಸನ: ಕೋವಿಡ್‌-19 ಕಾಯಿಲೆ ಕತೆ ಮುಗಿದ ನಂತರ ಇದಕ್ಕಿಂತ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಮ್ಮ ರೈತರು ಬೀದಿಗೆ ಬೀಳಬೇಕಾದ ಸಂದರ್ಭ ಎದುರಾಗಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕೊರೋನಾ ಸೋಂಕಿನಿಂದಾಗಿ ಬಡವರು, ಕೃಷಿಕರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಪಡಿತರ ಚೀಟಿ ಇಲ್ಲದಿದ್ದರೂ ಬಡವರಿಗೆ ಪಡಿತರ ವಿತರಿಸಬೇಕು. ಈ ಸಂಬಂಧ ಪ್ರಧಾನಿಯವರಿಗೂ ನಾನು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಪ್ರಧಾನಿಯವರೂ ನಿಮ್ಮ ಅನುಭವ ತಿಳಿಸುವಂತೆ ಕೋರಿದ್ದರು. ಈ ಕಠಿಣ ಸಂದರ್ಭ ರಾಜಕೀಯ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಾರ ನೋಡಿದರೆ ನಾನು ಮನೆಯಲ್ಲಿ ಕೂರಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ವಯಸ್ಸನ್ನು ಗಮನಿಸಿ ಎಲ್ಲೆಡೆ ಹೋಗಬಾರದು ಎಂದು ನಿರ್ಬಂಧ ಹೇರಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಸ್ವಯಂ ಸೇವೆ ಮಾಡುತ್ತಿದ್ದಾರೆ. ನಿರ್ಗತಿಕರಿಗೆ ಊಟ ಉಪಹಾರ ನೀಡುತ್ತಿದ್ದಾರೆ. ಶಾಸಕರಿಲ್ಲದ ಕ್ಷೇತ್ರದಲ್ಲೂ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಾನು ಮನವಿ ಮಾಡಿದ ಪತ್ರದಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದೇನೆ. ಕೆಲ ತಾಲ್ಲೂಕಿನಲ್ಲಿ ಬೆಳೆದ ಬೆಳೆ ಹಾಳಾಗಿರುವ ಬಗ್ಗೆಯೂ ಗಮನ ಸೆಳೆದಿದ್ದೆ. ಅಂತರರಾಜ್ಯ ವಹಿವಾಟಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೆ. ನಮ್ಮಲ್ಲಿನ ಬೇಡಿಕೆ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆ ಅಲ್ಲಿಗೆ ಅಗತ್ಯ ವಸ್ತುಗಳನ್ನ ಕಳುಹಿಸಬೇಕು. ಲಾಕ್ ಡೌನ್ ವಿಸ್ತರಣೆಯಿಂದ ಕಾಯಿಲೆಯ ಎಲ್ಲಾ ಸಮಸ್ಯೆಯೂ ಬಗೆಹರಿಯುವುದಿಲ್ಲ. ಆದರೆ ಪ್ರಾರಂಭದಲ್ಲಿ ಕೈಗೊಂಡ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT