ರಾಜ್ಯ

ದಾವಣಗೆರೆ: ಕೊರೋನಾ ಜಾಗೃತಿ ಮೂಡಿಸಲು ಹೋದ ಅಂಗನವಾಡಿ ಕಾರ್ಯಕರ್ತೆ ಮೇಲೆ ಗುಂಪಿನಿಂದ ಹಲ್ಲೆ

Raghavendra Adiga

ದಾವಣಗೆರೆ: ಮಾರಕ ಕೊರೋನಾವೈರಸ್ ಹರಡುವಿಕೆಯನ್ನು  ತಡೆಗಟ್ಟಲು ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಅಂಗನವಾಡಿ ಕಾರ್ಯಕರ್ತರೊಬ್ಬರ ಮೇಲೆ  ಗುಂಪೊಂದು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಬೀದರಹಳ್ಳಿ ತಾಂಡಾದಲ್ಲಿ ನಡೆದಿದೆ.

ಬೆಂಗಳೂರಿನಿಂದ ಬೀದರಹಳ್ಳಿ ತಾಂಡಾಗೆ ಮರಳಿದ ಎಂಟು ಯುವಕರು ಮನೆಯೊಳಗೇ ಕ್ವಾರಂಟೈನ್ ನಲ್ಲಿರಬೇಕು ಬೀದಿಗಳಲ್ಲಿ ಸಂಚರಿಸಬಾರದು ಎಂದು ಶಶಿಕಲಾ ಬಾಯಿ ಎಂಬ ಅಂಗನವಾಡಿ ಕಾರ್ಯಕರ್ತೆ ಸೂಚಿಸಿದ್ದಾರೆ. ಈ ಯುವಕರು ಬೆಂಗಳೂರು ನಗರದ ಸೋಂಕು ಪೀಡಿತ ಪ್ರದೇಶದವರಾಗಿರಬಹುದು ಎಂದು ಅವರು ಹೇಳಿದ್ದಾರೆ.ಆದರೆ ಯುವಕರು ಆಕೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ತೀವ್ರವಾಗಿ ಗಾಯಗೊಳಿಸಿದ್ದಾರೆ.

ಹಲ್ಲೆಗೊಳಗಾದ ಶಶಿಕಲಾ ಅವರನ್ನು ಸವಳಂಗ ಸಿಎಚ್‌ಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೊನ್ನಾಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ಗಾಯಾಳು ಶಶಿಕಲಾ ಅವರನ್ನು ಭೇಟಿಯಾದ ಹೊನ್ನಾಳಿ-ನ್ಯಾಮತಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯರು ಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನು ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದರು. ಇದಲ್ಲದೆ, ಹಲ್ಲೆ ನಡೆಸಿದವರ ವಿರುದ್ಧ  ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು.

ಸರ್ಕಾರ ತನ್ನೊಂದಿಗಿದೆ ಮತ್ತು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದೂ ಅವರು ಹೇಳಿದರು. ಘಟನೆ ಕುರಿತು ಸವಳಂಗ ಪೊಲೀಸರು ದೂರು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ

SCROLL FOR NEXT