ರಾಜ್ಯ

ಲಾಕ್‌ಡೌನ್ ವಿಸ್ತರಣೆ ಸ್ವಾಗತ; ರೂಪುರೇಷೆ, ಮದ್ಯ ಮಾರಾಟ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ: ಸಿಎಂ ಯಡಿಯೂರಪ್ಪ

ಕೋವಿಡ್-19 ನಿಯಂತ್ರಣಕ್ಕೆ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ ತರಲಾಗುವುದು ಎಂದಿದ್ದಾರೆ.

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಎಲ್ಲರೂ ಲಾಕ್‌ ಡೌನ್ ನಿಯಮ ಪಾಲಿಸಲೇಬೇಕು. ನಿಯಮ ಮುರಿದರೆ ಮತ್ತಷ್ಟು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಧಾನಿ ಮೋದಿಯವರ ಭಾಷಣದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಟ್ ಸ್ಪಾಟ್ ಗಳಲ್ಲಿ ಮತ್ತಷ್ಟು ಕಠಿಣವಾದ ನೀತಿ ಜಾರಿಗೆ ಬರಲಿದೆ. ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಿ ಎಂದು ಮನವಿ ಮಾಡಿದರು.

ಭಾರತ ಸರ್ಕಾರ ನಾಳೆ ಹೊರಡಿಸಲಿರುವ ಮಾರ್ಗಸೂಚಿಗಳ ಅನುಸಾರ ಕರ್ನಾಟಕ ಸರ್ಕಾರ ಲಾಕ್ ಡೌನ್ ಅನ್ನು ಸಮರ್ಪಕವಾಗಿ ಪಾಲನೆ ಮಾಡಲಿದೆ. ಏಪ್ರಿಲ್ 20ರವರೆಗೆ ಪ್ರಧಾನಿಯವರು ತಿಳಿಸಿದಂತೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲಿಸಲಾಗುವುದು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ನಾಡಿನ ಜನತೆ ಸ್ವಯಂ ಪ್ರೇರಿತರಾಗಿ ಈ ಕ್ರಮಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಮದ್ಯ ಮಾರಾಟ ಬಗ್ಗೆ ನಿರ್ಧಾರ: ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಪ್ರಧಾನಿಯವರು ಹೇಳಿದಂತೆ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೂ ಆರೋಗ್ಯ ಸೌಲಭ್ಯಗಳನ್ನು ಕಳೆದ ಎರಡು ತಿಂಗಳಲ್ಲಿ ಹೆಚ್ಚಿಸಲಾಗಿದೆ. ಅವರು ನೀಡಿದ ಏಳು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮನೆಯ ಹಿರಿಯರ ವಿಶೇಷ ಕಾಳಜಿ ವಹಿಸಿ. ಯಾವುದೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಹೆಚ್ಚು ಜೋಪಾನ ಮಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಮಾಡಿದ ಮಾಸ್ಕ್ ಬಳಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆಯ ಸಲಹೆಗಳನ್ನು ಪಾಲಿಸಿ. ಬಿಸಿ ನೀರು, ಕಷಾಯ ಕುಡಿಯಿರಿ. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಡ ಕುಟುಂಬಗಳಿಗೆ ನೆರವಾಗಬೇಕು. ಕೃಷಿ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಗೆ, ನೌಕರರಿಗೆ ನೆರವಾಗಿ. ನೌಕರಿಯಿಂದ ತೆಗೆಯಬಾರದು. ಪೊಲೀಸ್, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರನ್ನು ಗೌರವಿಸಬೇಕು. ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ, ಅಗತ್ಯ ವಸ್ತುಗಳ ಪೂರೈಕೆಗೆ, ಔಷಧಿ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗುವುದು. ವಿಶೇಷವಾಗಿ ವಲಸೆ ಕಾರ್ಮಿಕರು ಎಲ್ಲಿದ್ದೀರೋ ಅಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡಿದರು.

ಕೃಷಿಕರಿಗೆ ಯಾವುದೇ ತೊಂದರೆ ಆಗದಂತೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡಿದ್ದೇವೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತೇವೆ. ರಾಜ್ಯದಲ್ಲಿ ಈ ವರೆಗೆ 57,633 ವಾಹನಗಳನ್ನು ಜಪ್ತಿ ಮಾಡಿದ್ದೇವೆ. ನಿಮಯ ಉಲ್ಲಂಘಿಸಿದ 2,185 ಜನರ ವಿರುದ್ಧ ಎಫ್‌ಐ‌ಆರ್ ದಾಖಲು ಮಾಡಲಾಗಿದೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು