ರಾಜ್ಯ

ಕೊರೋನಾ ಮಹಾಮಾರಿಗೆ ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ ಮೂಲದ ವೃದ್ಧ ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರ್ನಾಟಕದಲ್ಲಿ ಮತ್ತೊಂದು ಬಲಿಯಾಗಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಬಳ್ಳಾಪುರ ಮೂಲದ 65 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 11ಕ್ಕೆ  ಏರಿಕೆಯಾಗಿದೆ.

ಮೂಲಗಳ ಪ್ರಕಾರ ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ವೃದ್ಧ ಮೊದಲೇ ಅಸ್ತಮಾ, ಬಿಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವಷ್ಟೇ ಇವರಿಗೆ  ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಇನ್ನು ಮೃತ ವೃದ್ಧನ ಕುರಿತು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದು, ವೃದ್ಧ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆ ಹೊಂದಿಲ್ಲ. ಕೊರೋನಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಆದರೂ ಇವರಿಗೆ ಕೊರೋನಾ ವೈರಸ್ ಹೇಗೆ ಬಂತು ಅನ್ನೋದು  ಪ್ರಶ್ನೆಯಾಗಿದೆ. ಹೀಗಾಗಿ ಮೃತ ವೃದ್ಧನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಮೃತನ ಮನೆಯ ಎಲ್ಲಾ ಸದಸ್ಯರನ್ನು ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಸೋಂಕಿತ ವೃದ್ಧ ವಾಸವಿದ್ದ ಏರಿಯಾ ಅಕ್ಕ ಪಕ್ಕದ 4 ವಾರ್ಡ್ ಗಳನ್ನ ಸೀಲ್‍ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ  ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸಂಬಂಧಿತ 2ನೇ ಸಾವು
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದು 2ನೇ ಕೊರೋನಾ ಸಂಬಂಧಿತ ಸಾವಾಗಿದೆ. ಈ ಮೊದಲು ಗೌರಿಬಿದನೂರಿನ 70 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದರು. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

SCROLL FOR NEXT