ರಾಜ್ಯ

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ನೆರವೇರಿದ ನಿಖಿಲ್-ರೇವತಿ ಮದುವೆ

Srinivasamurthy VN

ರಾಮನಗರ: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ರೇವತಿ ಅವರ ವಿವಾಹ ಸರಳವಾಗಿ ನೆರವೇರಿದೆ.

ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವ ನಡೆಯಿತು. ಮದುವೆಗೆಂದೇ ಮನೆಯ ಮುಂಭಾಗ ವಿಶೇಷವಾಗಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್  ಕುಮಾರ ಸ್ವಾಮಿ ರೇವತಿ ಅವರಿಗೆ ತಾಳಿಕಟ್ಟುವ ಮೂಲಕ ಅವರನ್ನು ಬಾಳಸಂಗಾತಿಯಾಗಿ ವರಿಸಿದರು. 

ಕುಮಾರಸ್ವಾಮಿ ಕುಟುಂಬದ ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಧಾರೆ‌ ಕಾರ್ಯ ನಡೆಸಿಕೊಟ್ಟರು. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ, ಅವರ ಬೀಗರಾದ ಮಂಜುನಾಥ  ದಂಪತಿ ಹಾಗೂ ಎರಡೂ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು. ಅಲ್ಲದೆ ಶಾಸಕ ಎಚ್.ಡಿ. ರೇವಣ್ಣ, ಭವಾನಿ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ ಸಹ ಪಾಲ್ಗೊಂಡರು.

42 ವಾಹನಗಳಿಗೆ ಪೊಲೀಸರ ಅನುಮತಿ
ಇನ್ನು ರಾಜ್ಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಿಖಿಲ್ ಮದುವೆಗೆ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದರು, ಮದುವೆ ಕಾರ್ಯಕ್ರಮದಲ್ಲಿ ಒಟ್ಟು 42 ವಾಹನಗಳ ಓಡಾಟಕ್ಕೆ ಪೊಲೀಸರು ಅನುಮತಿ ನೀಡಿದ್ದರು.

SCROLL FOR NEXT