ರಾಜ್ಯ

ಶೀತ, ನೆಗಡಿ, ಜ್ವರ ಬಂದಿದ್ದೇ ಆದರೆ, ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ: ರಾಜ್ಯದ ಜನತೆಗೆ ಸಿಎಂ ಸಲಹೆ

Manjula VN

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಶೀತ, ನೆಗಡಿ ಹಾಗೂ ಜ್ವರ ಬಂದಿದ್ದೇ ಆದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ. 

ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತಂತೆ ಎದುರಾಗಿರುವ ಪರಿಸ್ಥಿತಿ ಕುರಿತಂತೆ ಹಿರಿಯ ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ವರ, ನೆಗಡಿ, ಕೆಮ್ಮು ಅಥವಾ ಉಸಿರಾಟ ಸಮಸ್ಯೆ ಕಂಡು ಬಂದ ಕೂಡಲೇ ಜನರು ವೈದ್ಯರನ್ನು ಸಂಪರ್ಕಿ, ಗುಣಮುಖರಾಗಲು ಚಿಕಿತ್ಸೆ ಪಡೆದುಕೊಳ್ಳಬೇಕು. ಆದರೆ, ಲಕ್ಷಣಗಳು ಕಂಡು ಬಂದ ನಾಲ್ಕು ದಿನಗಳ ಬಳಿಕ ಸಾಕಷ್ಟು ಜನರು ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ಕಂಡು ಬಂದಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. ಸಭೆಯಲ್ಲಿ ವೈದ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಪತ್ತೆಯಾಗಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಶಿಷ್ಟಾಚಾರ ರೂಪಿಸುವಂತೆ ತಿಳಿಸುತ್ತಿದ್ದಾರೆ. ಐಸಿಯುನಲ್ಲಿರುವ ಸೋಂಕಿತರ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಹಾಗೂ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ದಿನಕ್ಕೆ 500ರಿಂದ 2000ರವರೆಗೂ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. 

ವೈರಸ್ ಲಕ್ಷಣಗಳಾದ ಶೀತ, ನೆಗಡಿ ಹಾಗೂ ಉಸಿರಾಟ ಸಮಸ್ಯೆಗಳು ಎದುರಾಗುತ್ತಿದ್ದಂತೆಯೇ ಜನರೇ ಸ್ವಯಂಪ್ರೇರಿತರಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಈ ನಡುವೆ ಸರ್ಕಾರ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೋಂಕಿತ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ. 

ಐಸಿಎಂಆರ್ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದು, ಪ್ರತೀ ಜಿಲ್ಲೆಯಲ್ಲೂ ಎರೆಡೆರಡು ಪ್ರಯೋಗಾಲಯಗಳನ್ನು ಸ್ಥಾಪಿಸಲು, ವೈದ್ಯಕೀಯ ಕಾಲೇಜಿನಲ್ಲಿ ಒಂದೊಂದು ಪ್ರಯೋಗಾಲಯ ಇರುವಂತೆ ಸೂಚಿಸಿದೆ. ಈ ಕಾರ್ಯವನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಲಾಕ್'ಡೌನ್ ವೇಳೆ ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆಯೂ ತಿಳಿಸಿದೆ. ಏಪ್ರಿಲ್ 20ರ ಬಳಿಕ ಕಾರ್ಯಗಳನ್ನು ಆರಂಭಿಸುವ ಕಂಪನಿಗಳಿಗೆ ಸರ್ಕಾರ ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ನೀಡಲಿದೆ. ಏಪ್ರಿಲ್ 21 ರಂದು ಸಭೆಯೊಂದು ನಡೆಯಲಿದ್ದು, ಈ ಕುರಿತು ಎಲ್ಲಾ ರೀತಿಯ ಚರ್ಚೆಗಳನ್ನು ನಡೆಸಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. 

ಪ್ಲಾಸ್ಮಾ ಥೆರಪಿ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅನುಮತಿ ಅಗತ್ಯವಿದೆ. ಹೀಗಾಗಿ ಅನುಮತಿಗಾಗಿ ಕಾಯುತ್ತಿದ್ದೇವೆಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

SCROLL FOR NEXT