ಬೆಂಗಳೂರು: ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ ತಂಡ ಭದ್ರತೆ ಕೈಗೊಂಡಿದ್ದು, ಇಡೀ ಪ್ರದೇಶ ಸಂಪೂರ್ಣ ಸೀಲ್‌ಡೌನ್ ಆಗಿದೆ.
ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತು ನಿಗಾ ವಹಿಸುತ್ತಿದ್ದಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದ್ದು ಪಾದರಾಯನಪುರ ಸಂಪೂರ್ಣ ಖಾಕಿಮಯವಾಗಿದೆ.
ಡಿಸಿಪಿಗೆ ತರಾಟೆ:
ಪಾದರಾಯನಪುರದಲ್ಲಿ ನಡೆದ ಗಲಾಟೆಯ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೊತ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಷ್ಟು ದೊಡ್ಡ ಘಟನೆ ನಡೆದರೂ ತಕ್ಷಣ ಯಾಕೆ ಆಗಮಿಸಲಿಲ್ಲ? ಎಂದು ಪ್ರಶ್ನಿಸಿದರು. ಪೊಲೀಸರು ಸರಿಯಾಗಿ ಬಂದೋಬಸ್ತ್ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಎಚ್ಚರಿಕೆ ನೀಡಿದರು
ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಗಲಭೆ ಸೃಷ್ಟಿಸಿದವರು ತಪ್ಪಿಸಿಕೊಳ್ಳಲು ಅವಕಾಶ ನೀಡಬೇಡಿ. ಅತ್ಯಂತ ಕಠಿಣ ಕ್ರಮ ಕೈಗೊಳ್ಳಿ ಎಂದು ನಗರದ ಎಲ್ಲ ಡಿಸಿಪಿಗಳಿಗೆ ಸಚಿವ ಬೊಮ್ಮಾಯಿ ಆದೇಶಿಸಿದರು.
ಆತಂಕದಲ್ಲಿ ಪೊಲೀಸರು:
ಪಾದರಾಯನಪುರ ಭಾನುವಾರ ರಾತ್ರಿ ಗಲಾಟೆ ನಡೆಸಿರುವ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತಮಗೇನಾದರೂ ಸೋಂಕು ತಗುಲಿದೆಯೇ ಎಂಬ ಆತಂಕದಲ್ಲಿದ್ದಾರೆ.
ಬಂಧಿತ ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಬೇರೆಡೆ ಕರೆದೊಯ್ಯುವ ವೇಳೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕೊರೊನಾ ಸೋಂಕು ಶಂಕಿತರು ಭಾಗಿಯಾಗಿರುವ ಮಾಹಿತಿಯಿರುವುದರಿಂದ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಳಿಕ ರಾತ್ರಿಯೇ 54 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಪುಂಡರ ಬಂಧನ ವೇಳೆ ಪೊಲೀಸರು ಅವರ ನೇರಸಂಪರ್ಕದಲ್ಲಿದ್ದರು. ಹಾಗಾಗಿ ನಮಗೆ ಕೊರೊನಾ ತಗುಲಿದೆಯಾ ಎಂಬ ಆತಂಕ ಪೊಲೀಸರನ್ನು ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಕೆಲಸ ಮಾಡಿದ್ದ ಎಲ್ಲ ಸಿಬ್ಬಂದಿಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಕೊಂಡು ಮನೆಗೆ ತೆರಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಕೆಲಸ ಮುಗಿದ ಬಳಿಕ ಸ್ಯಾನಿಟೈಸ್ ಮಾಡಿಕೊಳ್ಳದೇ ಮನೆಗಳಿಗೆ ತೆರಳಕೂಡದು ಎಂದು ಸೂಚಿಸಲಾಗಿದೆ. ಒಟ್ಟಿನಲ್ಲಿ ದುಷ್ಕರ್ಮಿಗಳ ದೆಸೆಯಿಂದಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸರು ಸಂಕಷ್ಟಕ್ಕೆ ಒಳಗಾದಂತಾಗಿದೆ.